‘’ಯುವಜನತೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿಕೊಳ್ಳುವ ಹಾಗೂ ಗ್ರಾಮದ ಸಾಧಕರನ್ನು ಗುರುತಿಸಲು ಉತ್ತಮ ವೇದಿಕೆ’’ – ಶ್ರೀ ಲಕ್ಷ್ಮೀಶ ತೋಳ್ಪಾಡಿ
ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ, ಗ್ರಾಮ ಪಂಚಾಯತ್ ನರಿಮೊಗರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಸಹಕಾರದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುದಾಬಿಯವರ ಪೋಷಕತ್ವದಲ್ಲಿ, ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದಂಗವಾಗಿ ಸ. ಉ. ಹಿ. ಪ್ರಾ. ಶಾಲೆ ನರಿಮೊಗರು ಇಲ್ಲಿನ ಶತ ಸಂಭ್ರಮ ವೇದಿಕೆಯಲ್ಲಿ ನಡೆದ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ -16 24-08-2024 ರಂದು ಅತ್ಯಂತ ಯಶಸ್ವಿಯಾಗಿ ನಡೆಯಿತು.
ನರಿಮೊಗರು ಹಾಗೂ ಶಾಂತಿಗೋಡು ಗ್ರಾಮದ ಎಂಟು ಶಾಲೆಯ ಆಯ್ದ ಸಾಹಿತ್ಯಾಸಕ್ತ ವಿದ್ಯಾರ್ಥಿಗಳು ಪುರುಷರ ಕಟ್ಟೆಯಿಂದ ಭಾರತ ಸೇವಾದಳದ ವಾದ್ಯಘೋಷ ಹಾಗೂ ಹುಲಿ ವೇಷ ಚೆಂಡೆ ವಾದ್ಯದೊಂದಿಗೆ ಕನ್ನಡ ಭುವನೇಶ್ವರಿಯ ಭಾವಚಿತ್ರದೊಂದಿಗೆ ಕನ್ನಡ ಪತಾಕೆಯನ್ನು ಹಾರಿಸುತ್ತಾ ಕನ್ನಡ ಭುವನೇಶ್ವರಿಗೆ ಜಯ ಘೋಷ ಹಾಕುತ್ತಾ ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷತೆ ವಹಿಸಿದ ಪುಟಾಣಿ ಕು. ಪೂಜಾಶ್ರೀ ಅವರನ್ನು ಹಾಗೂ ಸಮಾರೋಪ ಭಾಷಣಗಾರ ಪುಟಾಣಿ ಧವನ್ ಕುಮಾರ್ ಅವರನ್ನು ಕನ್ನಡ ಶಾಲು ಹಾಗು ಕನ್ನಡ ಪೇಟವನ್ನು ತೊಡಿಸಿ ಭವ್ಯ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತು.
ಸಭಾಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ಈ ಗ್ರಾಮದ ಶಾಲಾ ವಿದ್ಯಾರ್ಥಿಗಳಿಗೆ ಬರವಣಿಗೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವರೂಪದಲ್ಲೇ ಈ ಕಾರ್ಯಕ್ರಮ ನಡೆಯುತ್ತಿದ್ದು, ವಿದ್ಯಾರ್ಥಿಗಳೇ ಸರ್ವಾಧ್ಯಕ್ಷತೆ ಮತ್ತು ಸಮಾರೋಪ ಭಾಷಣಗಾರರಾಗಿರುವುದು ಒಂದು ವಿನೋತನ ಪ್ರಯೋಗ.ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ಮಾತ್ರ ಸೂಕ್ತ ಅವಕಾಶ ಒದಗಿಸಿ ಬೆಳೆಸುವ ಹಾಗೂ ಮಕ್ಕಳು ಸಂಭ್ರಮಿಸುವ ಸಾಹಿತ್ಯ ಹಬ್ಬವಿದಾಗಿದೆಯೆಂದರು”
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಶ್ರೀ ಜಯರಾಮ ಕೆದಿಲಾಯ ಶಿಬರ ಉದ್ಘಾಟಿಸಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ವೇದಿಕೆಯನ್ನು ನೀಡುವ ಈ ಗ್ರಾಮ ಸಾಹಿತ್ಯ ಸಂಭ್ರಮವು ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಅಭಿನಂದಿಸುತ್ತಾ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ನರಿಮೊಗರು ಸಿ ಆರ್ ಪಿ ಪರಮೇಶ್ವರಿ ಪ್ರಸಾದ್, ನರಿಮೊಗರು ಎಸ್ ಡಿ ಎಂ ಅಧ್ಯಕ್ಷರಾದ ಶ್ರೀ ಕೃಷ್ಣರಾಜ ಜೈನ್ ಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸರ್ವಾಧ್ಯಕ್ಷತೆ ವಹಿಸಿ ಸ. ಉ. ಹಿ. ಪ್ರಾ. ಶಾಲೆ ನರಿಮೊಗರು ಶಾಲೆ ವಿದ್ಯಾರ್ಥಿನಿ ಕು. ಪೂಜಾಶ್ರೀಯವರು “ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಸು ಕಾಣಬೇಕು ಮತ್ತು ಆ ಕನಸು ನನಸಾಗುವಲ್ಲಿ ನಮ್ಮ ಪ್ರಯತ್ನ ಬೇಕು. ಇಂತಹ ಒಂದು ಅವಕಾಶ ನನಗೆ ದೊರಕಿಸಿ ಕೊಟ್ಟ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆಯೆಂದರು
ಗ್ರಾಮದ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನೆ:
ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆ ಮಾಡಿರುವ ಶ್ರೀ ಅವಿನಾಶ್ ಕೊಡಂಕಿರಿ, ಶ್ರೀ ಪರೀಕ್ಷಿತ್ ತೋಳ್ಪಾಡಿ, ನಾಟಿ ವೈದ್ಯೆ ಶ್ರೀಮತಿ ಯಮುನಾ ಪೂಜಾರಿ, ಜಾನಪದ ಕ್ಷೇತ್ರದ ಶ್ರೀ ಸುಧಾಕರ್ ಕುಲಾಲ್, ಶಿಕ್ಷಣ ಕ್ಷೇತ್ರದ ಶ್ರೀಮತಿ ಸವಿತಾ ಕುಮಾರಿ ಎಂ. ಡಿ, ಕಲೆ ಮತ್ತು ಸಾಹಿತ್ಯ ಕ್ಷೇತ್ರದ ವಿದ್ವಾನ್ ಗೋಪಾಲಕೃಷ್ಣ, ಸಾಹಿತ್ಯ, ವೈದ್ಯಕೀಯ ಮತ್ತು ಜನಜಾಗೃತಿ ಕ್ಷೇತ್ರದ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ಕೃಷಿ ಕ್ಷೇತ್ರದ ಸಾಧನೆಗಾಗಿ ಶ್ರೀ ಜಯರಾಮ ಕೆದಿಲಾಯ, ಹೈನುಗಾರಿಕೆ ಕ್ಷೇತ್ರದ ಸಾಧನೆಗಾಗಿ ಶ್ರೀ ಜಯಗುರು ಹಿಂದಾರು, ಶಿಕ್ಷಣ, ಕಲೆ ಮತ್ತು ಪರಿಸರ ಜಾಗೃತಿಯಲ್ಲಿ ಮಾಡಿರುವ ಸಾಧನೆಗಾಗಿ ಶ್ರೀ ತಾರಾನಾಥ್ ಪಿ. ಸವಣೂರು ಇವರನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಲಕ್ಷ್ಮೀಶ್ ತೋಳ್ಪಾಡಿಯವರು ಅಭಿನಂದಿಸಿ ಯುವಜನತೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಗ್ರಾಮದ ಸಾಧಕರನ್ನು ಗುರುತಿಸಿ ಅಭಿನಂದಿಸುವ ಸಾಹಿತ್ಯ ಪರಿಷತ್ತಿನ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಶುಭ ಹಾರೈಸಿದರು.
ಸ. ಉ. ಹಿ ಪ್ರಾ ಶಾಲೆ ನರಿಮೊಗರು ವಿದ್ಯಾರ್ಥಿಗಳು ನಾಡಗೀತೆ ಹಾಡುವುದರ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಗ್ರಾಮ ಸಾಹಿತ್ಯ ಸಂಭ್ರಮದ 16 ಸರಣಿ ಕಾರ್ಯಕ್ರಮದಲ್ಲಿ ಒಟ್ಟು 1145 ವಿದ್ಯಾರ್ಥಿಗಳಿಗೆ ವಿವಿಧ ಗೋಷ್ಠಿಗಳಲ್ಲಿ ಅವಕಾಶ,101 ಸಾಧಕರಿಗೆ ಸನ್ಮಾನ,65 ಮಂದಿ ಸಾಹಿತ್ಯ ಆಸಕ್ತರಿಗೆ ಪ್ರಪ್ರಥಮ ಬಾರಿ ಕವಿಗೋಷ್ಠಿಯ,ಕಥಾ ಗೋಷ್ಠಿಯ ಅಧ್ಯಕ್ಷತೆ, 200 ಸಾರ್ವಜನಿಕರಿಗೆ ಕವಿಗೋಷ್ಠಿ ಅವಕಾಶ ನೀಡಲಾಗಿದ್ದು ತಾಲೂಕಿನ ಒಟ್ಟು 79 ಶಾಲೆಗಳು ಈವರೆಗೆ ಭಾಗಿಯಾಗಿವೆ ಎಂದು ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ಶ್ರೀ ನಾರಾಯಣ ಕುಂಬ್ರ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.
ನರಿಮೊಗರು ಶಾಲೆಯ ಮುಖ್ಯಗುರುಗಳಾದ ಶ್ರೀಲತಾ ರೈ ಎ ಸ್ವಾಗತಿಸಿದರು ,ಸಭಾ ಕಾರ್ಯಕ್ರಮವನ್ನು ಶ್ರೀ ಜಗದೀಶ್ ಬಾರಿಕೆ ಮತ್ತು ಸುಪ್ರೀತಾ ಚರಣ್ ಪಾಲಪ್ಪೆ ನಿರೂಪಿಸಿದರು. ಈ ಸಂದರ್ಭದಲ್ಲಿ ಪುತ್ತೂರಿನ ಜೋಸ್ ಆಲೂಕಾಸ್ ಚಿನ್ನದ ಮಳಿಗೆ ವತಿಯಿಂದ ಶಾಲೆಗೆ ಹಲವು ಕೊಡುಗೆಗಳನ್ನು ಹಸ್ತಾಂತರ ಮಾಡಲಾಯಿತು.
ವಿವಿಧ ಗೋಷ್ಠಿಗಳು
ವಿದ್ಯಾರ್ಥಿಗಳನ್ನು ಬರವಣಿಗೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮದಲ್ಲಿ ಪ್ರವಾಸ ಕಥನ ಹಾಗೂ ನನ್ನ ಆಪ್ತಮಿತ್ರ ಎಂಬ ಎರಡು ಲೇಖನ ವಾಚನ ಗೋಷ್ಠಿಗಳನ್ನು ಸೇರಿಸಲಾಗಿದ್ದು, ಸರ್ವರಿಂದಲೂ ಮೆಚ್ಚುಗೆಗೆ ಪಾತ್ರವಾಯಿತು.
ಸಭಾ ಕಾರ್ಯಕ್ರಮದ ಬಳಿಕ ಕ. ಸಾ. ಪ. ಪುತ್ತೂರು ಐ. ಎ. ಎಸ್ ದರ್ಶನ ಇದರ ಪ್ರೇರಕ ಭಾಷಣಕಾರರಾದ ಪ್ರಣವ್ ಭಟ್ ರಿಂದ ಕನ್ನಡದಲ್ಲೂ ಐ ಎ ಎಸ್ ಬರೆಯಿರಿ ಅಭಿಯಾನ ಕುರಿತು ಉಪನ್ಯಾಸ ನೀಡಿದರು. ಶಾಂತಿಗೋಡು ಸ. ಹಿ. ಪ್ರಾ. ಶಾಲೆ ಮುಖ್ಯಗುರುಗಳಾದ ಶ್ರೀಮತಿ ವಿನುತಾ ಉಪಸ್ಥಿತರಿದ್ದರು.
ಹಿರಿಯ ಸಾಹಿತಿ ಶ್ರೀ ನಾರಾಯಣ ರೈ ಕುಕ್ಕುವಳ್ಳಿಯವರ ಅಧ್ಯಕ್ಷತೆಯಲ್ಲಿ ಬಾಲಕವಿಗೋಷ್ಠಿ,ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯ ಮುಖ್ಯಗುರುಗಳಾದ ಶ್ರೀಮತಿ ಜಯಮಾಲ ವಿ. ಎನ್ ರವರ ಅಧ್ಯಕ್ಷತೆಯಲ್ಲಿ ಬಾಲಕಥಾಗೋಷ್ಠಿ, ಸ. ಹಿ. ಪ್ರಾ. ಶಾಲೆ ಆನಡ್ಕ ಇಲ್ಲಿನ ಸಹಶಿಕ್ಷಕಿ ಶ್ರೀಮತಿ ಮಾಲತಿ ರವರ ಅಧ್ಯಕ್ಷತೆಯಲ್ಲಿ ಪ್ರವಾಸ ಕಥನ ಗೋಷ್ಠಿ, ಸ. ಉ. ಹಿ. ಪ್ರಾ. ಶಾಲೆ ನರಿಮೊಗರಿನ ಮುಖ್ಯಗುರು ಶ್ರೀಮತಿ ಶ್ರೀಲತಾ ರೈ ಎ ರವರ ಅಧ್ಯಕ್ಷತೆಯಲ್ಲಿ ನನ್ನ ಆಪ್ತಮಿತ್ರ ಗೋಷ್ಠಿ ನೆರವೇರಿತು. ಗೋಷ್ಠಿಗಳಲ್ಲಿ ಶಾಂತಿಗಿರಿ ವಿದ್ಯಾನಿಕೇತನ ಶಾಲೆ ಮುಖ್ಯ ಗುರು ಅಶ್ವಥಿ ಅರವಿಂದ, ಸ. ಹಿ ಪ್ರಾ. ಶಾಲೆ ಮುಕ್ವೆ ಇಲ್ಲಿನ ಮುಖ್ಯಗುರು ಕಾರ್ಮೆಲಸ್ ಅಂದ್ರಾದೆ, ಸರಸ್ವತಿ ವಿದ್ಯಾಮಂದಿರ ಪುರುಷರಕಟ್ಟೆ ಇಲ್ಲಿನ ಮುಖ್ಯಗುರುಗಳಾದ ಶ್ರೀಮತಿ ದಿವ್ಯ,ಪಿ ಎಂ ಶ್ರೀ ಸ. ಹಿ. ಪ್ರಾ. ಶಾಲೆ ವೀರಮಂಗಲ ಶಾಲೆಯ ಮುಖ್ಯಗುರುಗಳಾದ ಶ್ರೀ ತಾರಾನಾಥ್ ಪಿ ಸವಣೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಮನ್ಮಥ ಶೆಟ್ಟಿ ಗೌರವ ಉಪಸ್ಥಿತರಿದ್ದರು.
ಸಮಾರೋಪ ಭಾಷಣವನ್ನು ಸ. ಹಿ. ಪ್ರಾ. ಶಾಲೆ ಶಾಂತಿಗೋಡು ಇಲ್ಲಿನ ವಿದ್ಯಾರ್ಥಿ ಶ್ರೀ ಧವನ್ ಕುಮಾರ್ ಅವರು ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಅತ್ಯಂತ ಪರಿಣಾಮಕಾರಿಯಾಗಿದೆ ತಮ್ಮ ಸಮಾರೋಪ ಭಾಷಣದಲ್ಲಿ ಸಂತೋಷ ವ್ಯಕ್ತಪಡಿಸಿದರು.
ವಿವಿಧ ಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಾಂತಿಗಿರಿ ವಿದ್ಯಾನಿಕೇತನ ಶಾಲೆ ಪಂಜಳ, ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆ ನರಿಮೊಗರು, ಸರಸ್ವತಿ ವಿದ್ಯಾ ಮಂದಿರ ಪುರುಷರ ಕಟ್ಟೆ, ಪಿ ಎಂ ಶ್ರೀ ಸ. ಹಿ. ಪ್ರಾ. ಶಾಲೆ ವೀರಮಂಗಲ, ಸ. ಹಿ ಪ್ರಾ. ಶಾಲೆ ಶಾಂತಿಗೋಡು, ಸ. ಹಿ. ಪ್ರಾ. ಶಾಲೆ ಮುಕ್ವೆ, ಸ. ಉ. ಹಿ. ಪ್ರಾ ಶಾಲೆ ನರಿಮೊಗರು ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶ್ರೀಕಲಾ ಕಾರಂತ್ ಅಳಿಕೆ, ಕವಿತಾ ಸತೀಶ್, ಸುನೀತಾ ಶ್ರೀರಾಮ್ ಕೊಯಿಲ, ಅಪೂರ್ವ ಕಾರಂತ್ ದರ್ಬೆ, ಕು. ಶ್ರೇಯಾ ಶೆಟ್ಟಿ, ಸುಪ್ರೀತಾ ಚರಣ್ ಪಾಲಪ್ಪೆ ವಿವಿಧ ಗೋಷ್ಠಿಗಳನ್ನು ನಿರೂಪಿಸಿದರು. ವಿವೇಕಾನಂದ ಸಿಬಿಎಸ್ಸಿ ಶಾಲೆಯ ಶಾಲಾ ನಾಯಕಿ ಶ್ರೀ ಲಕ್ಷ್ಮಿ ರೈ ಅವರು ರಾಷ್ಟ್ರಗೀತೆ ಹಾಡುವುದರ ಮೂಲಕ ಕಾರ್ಯಕ್ರಮ ಸಮಾಪ್ತಿಗೊಂಡಿತು.