ಲೇಖಕಿ, ಕವಿ, ಸಾಹಿತಿ, ಶಿಕ್ಷಕಿ ಶ್ರೀಮತಿ ಅಕ್ಷತಾ ಶೇಖರ್, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯವರು. ಡಿ.ಇಡಿ, ಬಿ.ಇಡಿ ಹಾಗೂ ಕನ್ನಡ ಮತ್ತು ತುಳು ವಿಷಯದಲ್ಲಿ ಎಂ. ಎ ಪದವಿಯನ್ನು ಪಡೆದಿರುವ ಅಕ್ಷತಾ ಶೇಖರ್ ರವರು ಶ್ರೀರಾಮ ಶಾಲೆ ನಟ್ಟಿಬೖಲು ಹಾಗೂ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ರಾಮಕುಂಜದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಕವಿ ಅಕ್ಷತಾ ಶೇಖರ್ ಅವರಿಗೆ ಚಿತ್ರಕಲೆ ಮತ್ತು ಸಂಗೀತದಲ್ಲಿ ಬಹಳ ಆಸಕ್ತಿ.
ವಿಶೇಷವಾಗಿ ಅಕ್ಷತಾ ರವರು ಮಕ್ಕಳಿಗೆ ಮತ್ತು ಶಾಲೆಗೆ ಸಂಬಂಧಪಟ್ಟ ಹಾಡುಗಳನ್ನು ಸ್ವತಃ ರಚಿಸಿ ತಮ್ಮ ಯೂಟ್ಯೂಬ್ ಚಾನೆಲ್ ಗೆ ಹಾಕಿ ಸಂಗೀತದಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಡಿಜಿಟಲ್ ತಂತ್ರಜ್ಞಾನದ ಮೂಲಕವೂ ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಸಾಹಿತ್ಯದ ಜೊತೆಗೆ ಚಿತ್ರಕಲೆಯಲ್ಲೂ ವಿಶೇಷ ಆಸಕ್ತಿ ಮತ್ತು ಜ್ಞಾನ ಹೊಂದಿರುವ ಇವರು ಪ್ರಮುಖ ವ್ಯಕ್ತಿಗಳ ಭಾವಚಿತ್ರಗಳನ್ನು ರಚಿಸಿ ನೀಡುವುದು ಇವರು ಇಷ್ಟದ ಅಭ್ಯಾಸವಾಗಿದೆ. ಇತ್ತೀಚೆಗೆ ಅಕ್ಷತಾ ರವರು ರಚಿಸಿರುವ ‘ತುಳುನಾಡ ದೈವಗಳು‘ ಮತ್ತು ‘ಚಿತ್ರಕಲಾ ಪರೀಕ್ಷಾ ಪುಸ್ತಕ‘ ಎಂಬ ಎರಡು ಕೃತಿಗಳು ಅನಾವರಣಗೊಂಡಿದ್ದು, ಪ್ರಸ್ತುತ ಕಸಾಪ ಜಾಲತಾಣದಲ್ಲಿ ಖರೀದಿಸಲು ಪುಸ್ತಕ ಪ್ರಿಯರಿಗೆ ಅವಕಾಶ ನೀಡಲಾಗಿದೆ.