ಡಾ. ಶ್ರೀಧರ್ ಎಚ್ ಜಿ ಅವರ ‘ಬಯಲು’ ಅಲ್ಲಮನ ಕಥನ ಕೃತಿ ಪರಿಚಯ

ಬಯಲು’ – ಅಲ್ಲಮನ ಕಥನ, ಡಾ.. ಶ್ರೀಧರ ಎಚ್.ಜಿ. ಇವರ ಮೂರನೆಯ ಕಾದಂಬರಿ. ಕ್ರಿ.ಶ. ೧೨ನೆಯ ಶತಮಾನದ ಮಹಾನ್ ಸಂತ ಅಲ್ಲಮ ಪ್ರಭುವಿನ ಬದುಕಿನ ಬಗೆಗೆ ಒಳನೋಟಗಳನ್ನು ನಮ್ಮದುರು ತೆರೆಯುವ ಕೃತಿಯಿದು. ಅಲ್ಲಮನ ವಚನ ಸಾಹಿತ್ಯಕ್ಕೆ ಪೂರಕವಾಗಿ ಹರಿಹರನ ರಗಳೆ, ರಾಘವಾಂಕ ವಿರಚಿತ ಸಿದ್ಧರಾಮ ಚಾರಿತ್ರ, ಚಾಮರಸನ ಪ್ರಭುಲಿಂಗ ಲೀಲೆ, ಎಳಂದೂರು ಹರೀಶ್ವರನ ಪ್ರಭುದೇವರ ಪುರಾಣ, ಗೂಳೂರು ಸಿದ್ಧವೀರಣ್ಣೊಡೆಯ ವಿರಚಿತ ಪ್ರಭುದೇವರ ಶೂನ್ಯ ಸಂಪಾದನೆ, ಅಕ್ಕಮಹಾದೇವಿಯ ವಚನ, ಬಸವಣ್ಣನ ವಚನ, ಚೆನ್ನಬಸವಣ್ಣ ಹಾಗೂ ಇನ್ನಿತರ ವಚನಗಳನ್ನು ಕಾದಂಬರಿ ರಚನೆಯ ಸಂದರ್ಭದಲ್ಲಿ ಲೇಖಕರು ಗಮನಿಸಿದ್ದಾರೆ.

ಶಿಕಾರಿಪುರ ತಾಲೂಕಿನಲ್ಲಿ ಬರುವ ಬಳ್ಳಿಗಾವಿ ಪ್ರಾಚೀನ ಕಾಲದಲ್ಲಿ ಬನವಸೆ ಹನ್ನೆರಡು ಸಾವಿರದ ಒಂದು ದೊಡ್ಡ ಪಟ್ಟಣವಾಗಿತ್ತು; ಅದಕ್ಕೆ ರಾಜಧಾನಿಯ ಗೌರವವಿತ್ತು. ಕಾಳಾಮುಖ ಶೈವರ ಪ್ರಮುಖ ಕೇಂದ್ರವಾದ ಈ ನಗರದಲ್ಲಿ ಶಿಕ್ಷಣವನ್ನು ನೀಡುವ ಘಟಿಕಾ ಸ್ಥಾನವಿತ್ತು. ಬೌದ್ಧ, ಜೈನ, ಶೈವ ಧರ್ಮಗಳ ಸಂಗಮ ಸ್ಥಳವೂ ಆಗಿತ್ತು. ಇಂತಹ ಪ್ರದೇಶದಿಂದ ಅಲ್ಲಮ ಬಂದಿರುವನೆAಬುದು ಗಮನಿಸಬೇಕಾದ ಸಂಗತಿ.

Bayalu - Novel

ಬದುಕಿನ ಸಂಕೀರ್ಣ ಸಂದರ್ಭದಲ್ಲಿ ಅನಿಮಿಷ ಯೋಗಿಯಿಂದ ಲಿಂಗವನ್ನು ಪಡೆದ ಬಳಿಕ ಅಲ್ಲಮನ ವ್ಯಕ್ತಿತ್ವದಲ್ಲಿ ಅಗಾಧವಾದ ಬದಲಾವಣೆ ಕಾಣುತ್ತದೆ. ಇಲ್ಲಿಂದ ಮುಂದೆ ಆತ ಶಿವಪಥವನ್ನರಸುವ ಯೋಗಿಯಾಗಿ ಕಾಣಿಸುತ್ತಾನೆ. ಬದುಕಿನ ಕೊನೆಯ ಘಟ್ಟದಲ್ಲಿ ಶ್ರೀಶೈಲದ ಕಡೆಗೆ ತೆರಳುವನು. ಸಾಧನೆಯ ಹಾದಿಯಲ್ಲಿರುವ ಶರಣನು ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯವೆಂಬ ಷಟ್‌ಸ್ಥಲವನ್ನು ದಾಟಬೇಕು ಎಂಬ ನಿಲುವು ಶರಣರ ವಚನಗಳಲ್ಲಿ ಬಂದಿದೆ. ಆತ್ಮವಿಕಾಸದ ಸೋಪಾನಗಳಿವು. ಇದನ್ನೇ ಅಲ್ಲಮ ‘ಬಯಲು’ ಎಂದು ಆಗಾಗ ಪ್ರಸ್ತಾಪಿಸುತ್ತಾನೆ. ಬಳ್ಳಿಗಾವೆಯಲ್ಲಿ ಹುಟ್ಟಿ, ಕಲ್ಯಾಣಕ್ಕೆ ತೆರಳಿ ಶರಣರಿಗೆ ಮಾರ್ಗದರ್ಶನ ಮಾಡುವ ಅಲ್ಲಮನನ್ನು ಆಧ್ಯಾತ್ಮಿಕ ನೆಲೆಯಲ್ಲಿ ಮೇರುಪುರುಷನೆಂದು ಸಾಮಾನ್ಯವಾಗಿ ಚಿತ್ರಿಸಿರುವುದನ್ನು ನೋಡುತ್ತೇವೆ. ಆದರೆ ‘ಬಯಲು’ ಕೃತಿಯಲ್ಲಿ ಅಲ್ಲಮನ ಮನಸ್ಸಿನ ಒಳಪದರದ ಸೂಕ್ಷ್ಮಗಳನ್ನು ತೆರೆದಿಡುವ ಪ್ರಯತ್ನವಿದೆ.

ನಟುವರ ಸಮುದಾಯದಲ್ಲಿ ಜನಿಸುವ ಅಲ್ಲಮ, ಬಳ್ಳಿಗಾವೆಯ ದೇವಾಲಯದಲ್ಲಿ ನಡೆಯುತ್ತಿದ್ದ ಮಾಧವಿಯ ನೃತ್ಯ ಪ್ರದರ್ಶನದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಮಲತೆಯನ್ನು ಭೇಟಿಯಾಗುವನು. ಅವರಿಬ್ಬರ ದಾಂಪತ್ಯ, ಕಾಮಲತೆಯ ಆಕಸ್ಮಿಕ ಮರಣ ಅಲ್ಲಮನ ಬದುಕಿಗೆ ಮಹತ್ವದ ತಿರುವನ್ನು ನೀಡಿದ ಘಟನೆ. ಕೃತಿಯಲ್ಲಿ ಅಲ್ಲಮನ ಬಾಲ್ಯ, ಶಿಕ್ಷಣ, ದಾಂಪತ್ಯ, ಕಲ್ಯಾಣದಲ್ಲಿ ಅಲ್ಲಮನ ವ್ಯಕ್ತಿತ್ವಕ್ಕೆ ದೊರಕಿದ ಮಾನ್ಯತೆಯ ಬಗೆಗೆ ಸಾಕಷ್ಟು ವಿವರಗಳಿವೆ. ಅಂತಿಮವಾಗಿ ಅಲ್ಲಮ ಬಯಲಾಗುವುದನ್ನು ಅತ್ಯಂತ ಸಾಂಕೇತಿಕವಾಗಿ ನೀಡಿದೆ. ಇದಕ್ಕೆ ಪೂರಕವಾಗಿ ಷಟ್‌ಸ್ಥಲ ಸಿದ್ಧಾಂತದ ಪರಿಕಲ್ಪನೆಯನ್ನು ವಚನ ಸಾಹಿತ್ಯದ ಹಿನ್ನೆಲೆಯಲ್ಲಿ ತರುವ ಪ್ರಯತ್ನವಿದೆ. ಮುಖ್ಯ ಕಥೆಗೆ ಪೂರಕವಾಗಿ ಅಕ್ಕಮಹಾದೇವಿ, ಸಿದ್ಧರಾಮ, ಬಸವಣ್ಣ ಮುಂತಾದ ಶರಣರ ಇತಿವೃತ್ತವನ್ನು ಸಂಕ್ಷಿಪ್ತವಾಗಿ ನೀಡಿದೆ.

ಒಟ್ಟಿನಲ್ಲಿ ಅಲ್ಲಮಪ್ರಭು ತನ್ನ ಪಾದಗಳನ್ನು ನೆಲದಲ್ಲಿ ಗಟ್ಟಿಯಾಗಿ ಊರಿ ನಿಧಾನವಾಗಿ ಊರ್ಧ್ವಮುಖವಾಗಿ ಬೆಳೆಯುವ ಚಿತ್ರವಿದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಆಯಾಮಗಳಲ್ಲಿ ಬೆಳೆಯುತ್ತಾ ಸಾಗುವ ‘ಬಯಲು’ ಕಾದಂಬರಿ ಆಧ್ಯಾತ್ಮಿಕ ಉನ್ನತಿಯಲ್ಲಿ ನಿಲ್ಲುತ್ತದೆ. ಹೀಗಾಗಿ ೩೪೦ ಪುಟಗಳ ‘ಬಯಲು’ ಕೃತಿಯ ಓದುವಿಕೆ ಭಿನ್ನವಾದ ಅನುಭವವನ್ನು ನೀಡುತ್ತದೆ ಎಂಬಲ್ಲಿ ಸಂಶಯವಿಲ್ಲ.

ನಿಮಗೆ ಈ ಕೃತಿ ಬೇಕಿದ್ದಲ್ಲಿ ನೀವು ”ಖರೀದಿಸಿ” ಅನ್ನು ಕ್ಲಿಕ್ ಮಾಡಿ ನೇರವಾಗಿ ಬಯಲು ಪುಸ್ತಕದ ಲೇಖಕರ ವಾಟ್ಸಾಪ್ ಗೆ ಹೋಗಬಹುದು. ಅಲ್ಲಿ ಅವರನ್ನು ಸಂಪರ್ಕಿಸಿ ನೇರವಾಗಿ ಲೇಖಕರಿಂದಲೇ ಪುಸ್ತಕವನ್ನು ಪಡೆಯಬಹುದು.