ಶ್ರೀ ಜಯಪ್ರಕಾಶ್ ಪುತ್ತೂರು ಅವರು ಮೂಲತಃ ದರ್ಬೆ ನಿವಾಸಿಯಾಗಿದ್ದು, ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿದ್ದಾರೆ. ಇವರು ಭಾರತದ ರಾಷ್ಟ್ರಪತಿಗಳಾದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪಿ.ಆರ್. ಓ ಆಗಿ ಸೇವೆ ಸಲ್ಲಿಸಿದ್ದು, ಮೂವರು ಕೇಂದ್ರ ರಕ್ಷಣಾ ಸಚಿವರ ಸಮನ್ವಯ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿ, ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನದ ವಿನ್ಯಾಸ ಹಾಗೂ ಅಭಿವೃದ್ಧಿ ಕೇಂದ್ರದ ಪ್ರಧಾನ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿ, ಡಿ ಆರ್ ಡಿ ಓ ಸಂಸ್ಥೆಯ ಪ್ರಾದೇಶಿಕ ಪಿ.ಆರ್.ಓ ಆಗಿ ಸೇವೆಯನ್ನು ಸಲ್ಲಿಸಿರುವ ಮಾತ್ರವಲ್ಲದೆ 14 ರಾಷ್ಟ್ರಗಳ ಕನ್ನಡ ಸಂಘಗಳಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಉಪನ್ಯಾಸ ನೀಡಿರುವ ಮಹಾನ್ ವ್ಯಕ್ತಿ.
ಇವರು ಭಾರತದ ಮಾಜಿ ರಾಷ್ಟ್ರಪತಿಗಳಾದ ಡಾ. ಎ ಪಿ ಜೆ ಅಬ್ದುಲ್ ಕಲಾಂ (APJ Abdul Kalam) ಅವರು ಬರೆದ ವಿಂಗ್ಸ್ ಆಫ್ ಫೈಯರ್ (Wings of Fire) ಕೃತಿಯನ್ನು ಅಗ್ನಿಯ ರೆಕ್ಕೆಗಳು ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ.
ಜಯಪ್ರಕಾಶ್ ಪುತ್ತೂರು ಅವರು ಈವರಗೆ ಒಟ್ಟು ಆರು ಕೃತಿಗಳನ್ನು ರಚಿಸಿದ್ದು, ”ದಶಕಗಳ ಸಾಹಿತ್ಯದ ಮೊಗಸಾಲೆಯಲ್ಲಿ” ಎಂಬ ಈ ಕೃತಿಯು ಏಳನೆಯ ಕೃತಿಯಾಗಿದೆ. ಈ ಕೃತಿ ಲೋಕಾರ್ಪಣಾ ಸಮಾರಂಭವು 28.01.2024 ಆದಿತ್ಯವಾರ ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ಪುತ್ತೂರಿನ ಅನುರಾಗ ವಠಾರದಲ್ಲಿ (ರೋಟರಿ ಬ್ಲಡ್ ಬ್ಯಾಂಕಿನ ಸಮೀಪ- ರಾಧಾಕೃಷ್ಣ ಮಂದಿರ ರಸ್ತೆ) ನಡೆಯಲಿದೆ.
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಸಲಹಾ ಸಮಿತಿಯ ಸದಸ್ಯರಾದ ಡಾ. ಮುರಳೀ ಮೋಹನ್ ಚೂoತಾರು ಅವರು ಈ ಕೃತಿ ಲೋಕಾರ್ಪಣೆ ಮಾಡಲಿದ್ದು, ಹಿರಿಯ ಸಾಹಿತಿಗಳಾದ ಪ್ರೊ.ವಿ ಬಿ ಆರ್ತಿಕಜೆಯವರು ಕೃತಿ ಪರಿಚಯ ಮಾಡಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ಲಕ್ಷ್ಮೀಶ ತೋಳ್ಪಾಡಿ, ಕ ಸಾ ಪ -ಜಿಲ್ಲಾ ಕೋಶಾಧ್ಯಕ್ಷರಾದ ಬಿ.ಐತಪ್ಪ ನಾಯ್ಕ್ , ಸಿಪಿಸಿಆರ್‌ಐ ನಿರ್ದೇಶಕರಾದ ಡಾ.ದಿನಕರ ಅಡಿಗ ಮುಂತಾದವರು ಉಪಸ್ಥಿತರಿರಲಿದ್ದಾರೆ. ಸಂದರ್ಭದಲ್ಲಿ ಜಯಪ್ರಕಾಶ್ ಅವರು ತಮ್ಮ ಪ್ರಥಮ ಕೃತಿಯನ್ನು ಸುಭಾಷ್ ರೈ ಕಡಮಜಲು ಅವರಿಗೆ ಹಸ್ತಾಂತರಿಸಲಿದ್ದಾರೆ.
ಮೇರು ವ್ಯಕ್ತಿತ್ವದ ಸರಳ ಸಜ್ಜನಿಕೆಯ ಹಿರಿಯ ಸಾಹಿತಿಗಳಾದ ಶ್ರೀ ಜಯಪ್ರಕಾಶ್ ಪುತ್ತೂರು ಅವರು ತಮ್ಮ ಈ ಕೃತಿಯನ್ನ ಲೋಕಾರ್ಪಣೆ ಮಾಡಲು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೆ ಅವಕಾಶ ನೀಡಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಅವರಿಗೆ ನಾವು ಚಿರಋಣಿ.
ಜಯಪ್ರಕಾಶ್ ಪುತ್ತೂರು ಅವರ ಅಭಿಮಾನಿಗಳಿಗೆ ಹಾಗೂ ಸರ್ವ ಸಾಹಿತ್ಯಸಕ್ತರಿಗೆ ಈ ಕಾರ್ಯಕ್ರಮಕ್ಕೆ ಗೌರವಪೂರ್ವಕ ಸ್ವಾಗತ ಬಯಸುತ್ತೇನೆ.
ವಂದನೆಗಳೊಂದಿಗೆ
ಲೇಖನ: ಪುತ್ತೂರು ಉಮೇಶ್ ನಾಯಕ್
ಅಧ್ಯಕ್ಷರು, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು