ಕಸಾಪಾ ಪುತ್ತೂರು – ಕೊಡಿಪ್ಪಾಡಿ ಗ್ರಾಮ ಸಾಹಿತ್ಯ ಸಂಭ್ರಮ

ಸಾಹಿತ್ಯ ವೇದಿಕೆಯಿಂದ ಗ್ರಾಮೀಣ ಪ್ರತಿಭೆಗಳಿಗೆ ಸಾಹಿತ್ಯ ಕ್ಷೇತ್ರದಲ್ಲಿ  ಬೆಳೆಯಲು ಗ್ರಾಮ ಸಾಹಿತ್ಯ ಸಂಭ್ರಮ ಪರಿಣಾಮಕಾರಿ- ಶ್ರೀ ಸೋಮಪ್ಪ ಪೂಜಾರಿ

ಪುತ್ತೂರು,ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಕೊಡಿಪ್ಪಾಡಿ ಸಹಯೋಗದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುದಾಬಿಯವರ ಪೋಷಕತ್ವದಲ್ಲಿ ದಿನಾಂಕ 29-6-2024 ಶನಿವಾರ ಕೊಡಿಪ್ಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ರಾಮ ಸಾಹಿತ್ಯ ಸಂಭ್ರಮ 14ನೇ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ” ಗ್ರಾಮ ಮಟ್ಟದ ಸಾಹಿತಿಗಳನ್ನ ಗುರುತಿಸಿ, ಗ್ರಾಮೀಣ ಯುವ ಮತ್ತು ವಿದ್ಯಾರ್ಥಿಗಳಿಗೆ ಸಾಹಿತ್ಯದ ಚಟುವಟಿಕೆಗಳನ್ನು  ಆಯೋಜನೆ ಮಾಡುವುದರ ಮೂಲಕ ಉತ್ತಮ ಪರಿಣಾಮ ಬೀರಲು ಗ್ರಾಮ ಸಾಹಿತ್ಯ ಸಂಭ್ರಮ ಒಳ್ಳೆಯ ಕಾರ್ಯಕ್ರಮವಾಗಿದೆಯೆಂದು” ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸೋಮಪ್ಪ ಪೂಜಾರಿ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ವಹಿಸಿದ ಕೊಡಿಪ್ಪಾಡಿ ಸರಕಾರಿ ಉನ್ನತೀಕರಿಸಿದ ಹಿ ಪ್ರಾ ಶಾಲೆಯ ಕು ಶಮಿತ ಮಾತನಾಡಿ “ಇದೊಂದು ಶಾಲಾ ಮಕ್ಕಳಿಗೆ ಸಾಹಿತ್ಯದ ಬಗ್ಗೆ ಒಲವು ಮೂಡಿಸುವ ಕಾರ್ಯಕ್ರಮವಾಗಿದ್ದು ನಮ್ಮಲ್ಲಿರುವ ಪ್ರತಿಭೆಗೆ ಗ್ರಾಮ ಮಟ್ಟದಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಕೃತಜ್ಞತೆಯನ್ನು ಅರ್ಪಿಸಿದರು “.

ಸಮಾರಂಭದಲ್ಲಿ ಗ್ರಾಮ ಮಟ್ಟದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಶ್ರೀ ಬಿ. ರಾಧಾಕೃಷ್ಣ ಭಟ್ ಬಟ್ರಪ್ಪಾಡಿ, ಶ್ರೀ ಮನ್ಮಥ ಶೆಟ್ಟಿ, ಶ್ರೀ ರವೀಂದ್ರ ಆಚಾರ್ಯ ಇವರನ್ನು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಹಾಗು ಸುದಾನ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ರವರು ಅಭಿನಂದಿಸಿ ಅಭಿನಂದನಾ ನುಡಿಗಳನ್ನಾಡಿದರು.

ಅಭಿನಂದನೆ ಸ್ವೀಕರಿಸಿದವರ ಪರವಾಗಿ ಶ್ರೀ ಮನ್ಮಥ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಿಗುರೆಲೆ  ಸಾಹಿತ್ಯ ಬಳಗದ ಸದಸ್ಯರಾದ  ವಾರ್ತಾ ಭಾರತಿ ಪತ್ರಿಕೆಯ ಬೆಂಗಳೂರು ವರದಿಗಾರರಾದ ಶ್ರೀ ಇಬ್ರಾಹಿಂ ಖಲೀಲ್ ರವರು ಪತ್ರಿಕಾ ವರದಿಯಲ್ಲಿ ಮಾಡಿರುವ ಸಾಧನೆಗಾಗಿ ಗೌರವಿಸಲಾಯಿತು. 

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಶರೀಫ್ ರವರು “ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಗೆ ತರಲು ಇದೊಂದು ಒಳ್ಳೆಯ ಆಲೋಚನೆಯಾಗಿದೆಯೆಂದರು ಅಲ್ಲದೇ ಸಾಹಿತಿ ಬಿ. ಟಿ. ಲಲಿತಾ ನಾಯಕ್ ರವರ ಕವನ ಪ್ರಸ್ತುತಪಡಿಸಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀ ಪುತ್ತೂರು ಉಮೇಶ್ ನಾಯಕ್ ವಹಿಸಿ ” ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಿದ ಕೊಡಿಪ್ಪಾಡಿ ಗ್ರಾಮದ ಮಹಾಜನತೆಗೆ ಧನ್ಯವಾದ ತಿಳಿಸಿದರು. ಸಮಾರಂಭದಲ್ಲಿ ಶಿವಮಣಿ ಕಲಾ ತಂಡದ ಶ್ರೀ ಮನುಕುಮಾರ್ ಶಿವನಗರ ಇವರ ಡಿಜಿಟಲ್ ವಾರ ಪತ್ರಿಕೆ ಶಿವಮಣಿ ಕಲಾರಂಗ ವನ್ನು ಗ್ರಾಮ ಪಂಚಾಯತ್ ಪಿಡಿಒ ಶ್ರೀ ಶರೀಫ್ ಅವರು ಬಿಡುಗಡೆಗೊಳಿಸಿದರು. 

ಪುತ್ತೂರಿನ ಉಪತಹಸಿಲ್ದಾರ್ ಕುಮಾರಿ ಸುಲೋಚನಾ ಅವರು   ಸಾಹಿತ್ಯ ಪರಿಷತ್ತಿಗೆ 500 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಚಿಗುರೆಲೆ ಸಾಹಿತ್ಯ ಬಳಗದ ಕು. ಪ್ರತೀಕ್ಷಾ ಆರ್ ಕಾವು ಸ್ವಾಗತಿಸಿ, ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ಶ್ರೀ ನಾರಾಯಣ ಕುಂಬ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಂಧ್ಯಾ ಎಸ್ ರೈ ಕಾರ್ಯಕ್ರಮ ನಿರೂಪಿಸಿ, ರಶ್ಮಿತಾ ಸುರೇಶ್ ಜೋಗಿಬೆಟ್ಟು ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಾಹಿತ್ಯಕ್ಕೆ ಕೊಡಿಪ್ಪಾಡಿ ಗ್ರಾಮದ ಕೊಡುಗೆ ಕುರಿತು ಶ್ರೀ. ಬಿ. ರಾಧಾಕೃಷ್ಣ ಭಟ್ ಬಟ್ರಪ್ಪಾಡಿ ಹಾಗು ಕನ್ನಡದಲ್ಲೂ ಐ ಎ ಎಸ್ ಬರೆಯಿರಿ ಕುರಿತು ಉಪನ್ಯಾಸವನ್ನು ಶ್ರೀ ಪ್ರಣವ್ ಭಟ್ ನೆರವೇರಿಸಿದರು. ತದನಂತರ  ಕೊಡಿಪ್ಪಾಡಿ ಮತ್ತು ಅರ್ಕ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀ ಗಣೇಶ್ ಎಸ್ ರವರ ಅಧ್ಯಕ್ಷತೆಯಲ್ಲಿ ಬಾಲಕವಿಗೋಷ್ಠಿ, ಶ್ರೀಮತಿ ಸುರೇಖಾ ರೈ ಯವರ ಅಧ್ಯಕ್ಷತೆಯಲ್ಲಿ ಬಾಲ ಕಥಾಗೋಷ್ಠಿ ಜರಗಿತು. ಉಭಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ನಂತರ ಕೊಡಿಪ್ಪಾಡಿ ಅಂಚೆ ಪಾಲಕರಾದ ಶ್ರೀಮತಿ ಸಹನಾ ಎಸ್. ಎಚ್ ರವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ವಿಭಾಗದ ಯುವಕವಿಗೋಷ್ಠಿ  ನಡೆಯಿತು.ಕವಿಗೋಷ್ಠಿಯಲ್ಲಿ ಯಶಸ್ವಿ ಗಣೇಶ್ ಸೋಮವಾರಪೇಟೆ, ದೇವಿಕಾ ಜೆ. ಜಿ. ಬನ್ನೂರು, ಉಮಾಶಂಕರಿ ಮರಿಕೆ, ಮನುಕುಮಾರ್ ಶಿವನಗರ, ವಿಂಧ್ಯಾ ಎಸ್ ರೈ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಗಿರೀಶ್ ಉಪ್ಪಿನಂಗಡಿ, ಅಕ್ಷತಾ ನಾಗನಕಜೆ ಭಾಗವಹಿಸಿದ್ದರು. ಸಮಾರೋಪ ಭಾಷಣವನ್ನು ಸ. ಹಿ. ಪ್ರಾ. ಶಾಲೆ ಅರ್ಕ ಇಲ್ಲಿನ ವಿದ್ಯಾರ್ಥಿನಿ ಕು. ಅನ್ವಿತರವರು “ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರಲು ಸೂಕ್ತವಾದ ವೇದಿಕೆಯಾಗಿದೆ.

ಕನ್ನಡವನ್ನು ಉಳಿಸಿ ಬೆಳೆಸಲು ಕನ್ನಡದ ಬಗ್ಗೆ ತಿಳಿದುಕೊಳ್ಳಬೇಕು.ಹಾಗಾಗಿ ಈ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಕ್ಕೆ ನಾನು ಆಭಾರಿಯಾಗಿದ್ದೇನೆಯೆಂದರು” ವೇದಿಕೆಯಲ್ಲಿ ಹಿರಿಯ ಸಾಹಿತಿಗಳು ಮಧು ಪ್ರಪಂಚ ಪತ್ರಿಕೆ ಸಂಪಾದಕರಾದ ಶ್ರೀ ನಾರಾಯಣ ರೈ ಕುಕ್ಕುವಳ್ಳಿ ಉಪಸ್ಥಿತರಿದ್ದರು. ವಿವಿಧ ಗೋಷ್ಠಿಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಗಿರಿಧರ್ ಗೌಡ, ಶ್ರೀಮತಿ ಸ್ಮಿತಾ. ಪಿ. ರವರು ಗೌರವ ಉಪಸ್ಥಿತರಿದ್ದರು. ಅಲ್ಲದೇ ಗ್ರಾಮ ಪಂಚಾಯತ್ ಕೊಡಿಪ್ಪಾಡಿಯ ಸಿಬ್ಬಂದಿಗಳಾದ ಶ್ರೀ ರವೀಂದ್ರ ಆಚಾರ್ಯ, ಕಿಶನ್ ಕುಮಾರ್ ಮತ್ತು ಶ್ರೀ ಪ್ರಶಾಂತ್ ಅರ್ಕ ಸಹಕರಿಸಿದ್ದರು. ಗೋಷ್ಠಿಗಳನ್ನು ರಶ್ಮಿತಾ ಸುರೇಶ್ ಜೋಗಿಬೆಟ್ಟು, ಅಪೂರ್ವ ಕಾರಂತ್, ಪ್ರತೀಕ್ಷಾ ಆರ್ ಕಾವು, ಅಕ್ಷತಾ ನಾಗನಕಜೆ ನಿರ್ವಹಿಸಿದರು. ಕಾರ್ಯಕ್ರಮ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆಗೈದು ನಾಡಗೀತೆಯೊಂದಿಗೆ ಆರಂಭಗೊಂಡು ರಾಷ್ಟ್ರ ಗೀತೆಯೊಂದಿಗೆ ಸಮಾಪನಗೊಂಡಿತು.

Leave a comment