ಪುತ್ತೂರು ನಗರ ಕಾನೂನು ಸುವ್ಯವಸ್ಥೆ – ಎಸ್. ಐ,ಶ್ರೀ ಆಂಜನೇಯ ರೆಡ್ಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ ಭೇಟಿ
ಪುತ್ತೂರು, ಪುತ್ತೂರು ನಗರ ಪೊಲೀಸ್ ಠಾಣೆಯ ಕಾನೂನು ಎಸ್ ಐ ಶ್ರೀ ಆಂಜನೇಯ ರೆಡ್ಡಿ ಅವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಚಟುವಟಿಕೆಗಳ ಕುರಿತಾಗಿ ಪ್ರಶಂಸನಾ ಮಾತುಗಳನ್ನಾಡಿರು,ಮುಖ್ಯವಾಗಿ ಸಾಹಿತ್ಯ ಪರಿಷತ್ತು ವತಿಯಿಂದ ನಡೆಸಿಕೊಂಡು ಬರುವ ಕನ್ನಡದಲ್ಲೂ ಐ.ಎ.ಎಸ್ ಬರೆಯಿರಿ ಎಂಬ ಅಭಿಯಾನದ ಕುರಿತಾಗಿ ಮೆಚ್ಚುಗೆ ಮಾತುಗಳನ್ನಾಡಿ, ಐಎಎಸ್ – ಐಪಿಎಸ್ ಹಾಗೂ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡುವುದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಈ ಭಾಗದಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಐ.ಎ.ಎಸ್- ಐ.ಪಿ.ಎಸ್ ಅಧಿಕಾರಿಗಳು ಹೊರಹೊಮ್ಮಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದಕ್ಷ ಪ್ರಾಮಾಣಿಕ ಅಧಿಕಾರಿಗಳಾದ
ಶ್ರೀ ಆಂಜನೇಯ ರೆಡ್ಡಿ ಅವರ ಕಾರ್ಯತತ್ಪರತೆಗೆ ಸಾಹಿತ್ಯ ಪರಿಷತ್ ವತಿಯಿಂದ ಅವರನ್ನು ಗೌರವಿಸಲಾಯಿತು.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಈಗಾಗಲೇ ಕನ್ನಡದಲ್ಲೂ ಐಎಎಸ್ ಪರೀಕ್ಷೆ ಬರೆಯಿರಿ ಎಂಬ ಅಭಿಯಾನದಡಿಯಲ್ಲಿ ಸುಮಾರು 75ಕ್ಕೂ ಅಧಿಕ ಕಾರ್ಯಗಾರಗಳನ್ನು ನಡೆಸಿದ್ದು ಮಾತ್ರವಲ್ಲದೆ ಪ್ರತಿ ತಿಂಗಳು ನಡೆಯುವ ಗ್ರಾಮ ಸಾಹಿತ್ಯ ಸಂಭ್ರಮದಲ್ಲೂ ಈ ಕಾರ್ಯಕ್ರಮವನ್ನು ಅಳವಡಿಸಲಾಗಿದ್ದು 20,000ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾರ್ಯಗಾರದ ಸದುಪಯೋಗ ಪಡೆದುಕೊಂಡಿದ್ದಾರೆ. ಮಾತ್ರವಲ್ಲದೆ, ವಿವೇಕಾನಂದ ಐಎಎಸ್ ಅಧ್ಯಯನ ಕೇಂದ್ರದ ತಜ್ಞ ತರಬೇತುದಾರರಾದ ಶ್ರೀ ದರ್ಶನ ಗರ್ತಿಕೆರೆಯವರ ಸಹಕಾರದಲ್ಲಿ ‘ಐಎಎಸ್ ದರ್ಶನ’ ಎಂಬ ಉಚಿತ ಯುಟ್ಯೂಬ್ ಚಾನೆಲ್ ಅನ್ನು ಕೂಡ ನಡೆಸಲಾಗುತ್ತಿದೆ.