ಪುತ್ತೂರಿನ ಲ್ಯಾಡರ್ ಮ್ಯಾನ್ – ದೂರ ದೃಷ್ಟಿಯುಳ್ಳ  ಸಾಧಕನ ಯಶೋಗಾಥೆ ಹಾಗೂ ಬದುಕು ಬದಲಿಸಬಲ್ಲ ಪ್ರೇರಕ ಮಾತುಗಳು

ಸಾಹಿತ್ಯ ಪೋಷಕರಾಗಿರುವ  ಪುತ್ತೂರಿನ ಶ್ರೀ ಕೇಶವ್ ಅಮೈ ಅವರ ಮಾಲಕತ್ವದ ಎಸ್. ಆರ್ ಕೆ ಲ್ಯಾಡರ್ಸ್, ಇಂದು ತನ್ನನ್ನು ಕಳೆದ 25 ವರ್ಷಗಳಿಂದ  ಬೆಳೆಸಿದ ತನ್ನ ಗ್ರಾಹಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಮತ್ತು ಹಿತೈಷಿಗಳಿಗೆ  ಧನ್ಯವಾದ ಸಮರ್ಪಿಸುವ  ನಿಟ್ಟಿನಲ್ಲಿ ರಜತ ಮಹೋತ್ಸವ ಸಮಾರಂಭವನ್ನು  ಅತ್ಯಂತ ವಿಜೃಂಭಣೆ ಹಾಗೂ  ಧನ್ಯತಾ ಭಾವದಿಂದ ಆಚರಿಸಿಕೊಂಡಿದೆ.

ಈ ಸಂದರ್ಭದಲ್ಲಿ ಸಂಸ್ಥೆಗೆ ಹಾಗೂ ಕೇಶವ ಅವರಿಗೆ ಶುಭ ಹಾರೈಸುತ್ತಾ…ಅವರ ಬಗ್ಗೆ ನನ್ನ ಅನುಭವಕ್ಕೆ ಬಂದ ಒಂದೆರಡು ಮಾತುಗಳು…..

2023 ಡಿಸೆಂಬರ್ 3ರಂದು ವಿಶ್ವ ಅಂಗವಿಕಲರ ದಿನಾಚರಣೆ ಕುರಿತಾಗಿ ಪುತ್ತೂರಿನ  ಪ್ರಜ್ಞಾ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ಆಶ್ರಮದಲ್ಲಿ ವಿಕಲಚೇತನರ ಇಲಾಖೆ ಹಾಗೂ   ರೋಟರಿ ಕ್ಲಬ್ ಪುತ್ತೂರು ಯುವ ಸಹಕಾರದೊಂದಿಗೆ  ವಿಕಲಚೇತನ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  

ಈ ಕಾರ್ಯಕ್ರಮದಲ್ಲಿ  ತಮ್ಮ ತಮ್ಮ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ 5 ಮಾಡಿದ ವಿಶಿಷ್ಟ ಚೇತನರನ್ನು  “ವಿಶಿಷ್ಟ ಸಾಧಕ ಪ್ರಶಸ್ತಿ” ನೀಡಿ ಗೌರವಿಸುವ ನಿಟ್ಟಿನಲ್ಲಿ 100% ದೃಷ್ಟಿಯನ್ನು ಕಳೆದುಕೊಂಡರೂ ತನ್ನ ಸ್ವತಃ ಪ್ರಯತ್ನ- ಪರಿಶ್ರಮದಿಂದ   ಉದ್ಯಮದಲ್ಲಿ ಯಶಸ್ಸನ್ನು ಕಂಡ  ಶ್ರೀ ಕೇಶವ ಅಮೈ ಅವರನ್ನು  ಗೌರವಿಸುವ ಸಲುವಾಗಿ ಅವರಿಗೆ ಆಮಂತ್ರಣ ನೀಡಲಾಯಿತು.

ಪ್ರಥಮ ಬಾರಿ ಅವರನ್ನು ಸಂಪರ್ಕಿಸಿ ಈ ವಿಷಯವನ್ನು ತಿಳಿಸಿ ಪ್ರಶಸ್ತಿ ಸ್ವೀಕರಿಸಲು ಬರಬೇಕೆಂದು ವಿನಂತಿಸಿದಾಗ.. ಎರಡು ದಿನ ಬಿಟ್ಟು ತಿಳಿಸುವುದಾಗಿ ಹೇಳಿದರು. ಪ್ರಶಸ್ತಿ ಸ್ವೀಕರಿಸಲು ಒಪ್ಪಿಗೆ ಸೂಚಿಸಲು  ಅವರು ಎರಡು ದಿನ ತೆಗೆದುಕೊಂಡ ಕಾರಣ ನಮಗೆ ತಿಳಿದಿರಲಿಲ್ಲ, ಬಹುಶಃ ಒಪ್ಪಿಕೊಂಡ  ಅನ್ಯ ಕಾರ್ಯಕ್ರಮ ಇರಬಹುದೆಂದು ಭಾವಿಸಿದ್ದೆ.  ಎರಡು ದಿನ ಬಳಿಕ ಕಾರ್ಯಕ್ರಮಕ್ಕೆ ಬರುವುದಾಗಿ ಒಪ್ಪಿಗೆ ಸೂಚಿಸಿದರು.

SRK Ladders Ashok Amai
SRK Ladders Ashok Amai

 ಕಾರ್ಯಕ್ರಮದ ದಿನದಂದು  ಐದು ಜನ ಸಾಧಕರನ್ನು ಏಕಕಾಲದಲ್ಲಿ ವೇದಿಕೆಯಲ್ಲಿ ಗೌರವಿಸಲಾಯಿತು.  ಬಳಿಕ ಪ್ರಶಸ್ತಿ ಪುರಸ್ಕೃತರ ಪರವಾಗಿ ಕೇಶವ ಅಮೈ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕೆಂದು ವಿನಂತಿಸಲಾಯಿತು. ವೇದಿಕೆಯ ಅಗಲವು ಕೇವಲ 6 ಅಡಿ ಉದ್ದ 12 ಅಡಿ ಇದ್ದು  ಅತ್ಯಂತ ಇಕ್ಕಟ್ಟಾಗಿತ್ತು. ಈ ಕಾರಣ ಮಾತ್ರವಲ್ಲದೆ ಕೂತ ಸ್ಥಳದಿಂದ  ನುಡಿಪೀಠ ವರೆಗೆ ಹೋಗಲು ಕೇಶವ್  ಅವರಿಗೆ ಕಷ್ಟವಾಗಬಹುದು ಎಂಬ ತಪ್ಪು ಕಲ್ಪನೆಯಲ್ಲಿ   ಅವರು ಕೂತಲ್ಲಿಂದಲೇ ಶುಭ ಹಾರೈಸಬೇಕೆಂದು ವಿನಂತಿ ಮಾಡಲಾಯಿತು.

ಅದಕ್ಕೆ  ಖಡಾಖಂಡಿತವಾಗಿ  ಒಪ್ಪದೇ .. ತಾನು ನುಡಿಪೀಠದಿಂದಲೇ ಶುಭವನ್ನ ಹಾರೈಸುವುದಾಗಿ ಹಠ ಮಾಡಿದರು ( ಪ್ರಾರಂಭದ 9 ನಿಮಿಷದ ವಿಡಿಯೋದಲ್ಲಿ ಗಮನಿಸಬಹುದು)

 ಬಳಿಕ ನುಡಿಪೀಠಕ್ಕೆ ಹೋಗಿ 180 ಸೆಕೆಂಡುಗಳ ಮಾತು ನಿಜಕ್ಕೂ ಅದ್ಭುತ ಮಾತುಗಳಾಗಿತ್ತು. ಅನೇಕರ ಜೀವನ ಬದಲಾಯಿಸುವ ಪ್ರೇರಕ ಮಾತಾಗಿತ್ತು. ( ವಿಡಿಯೋದಲ್ಲಿ ತಾವು ಗಮನಿಸಬಹುದು)

 ಎಲ್ಲರೂ ಹೇಳಿದ್ದನ್ನು ಕೇಳಿದ್ದಲ್ಲಿ ನಾನು ಇಂದಿಗೆ ಕೂತಲ್ಲೇ ಇರಬೇಕಾಗಿತ್ತು. ತಾನು ಪ್ರತಿಯೊಂದು ವಿಚಾರದಲ್ಲಿ ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳುತ್ತೇನೆ. ಆದ್ದರಿಂದ ತಾನು ಇಂದು ಯಶಸ್ವಿ ಉದ್ಯಮಿಯಾಗಿದ್ದೇನೆ. ನನ್ನಲ್ಲಿ ಯಾವುದೇ ಕೊರತೆಗಳು ಅಥವಾ ನ್ಯೂನ್ಯತೆಗಳು ಇಲ್ಲ,  ಎಲ್ಲರಂತೆ ನಾನು ಸರಿಸಮಾನವಾಗಿ  ಕಾರ್ಯಪ್ರವೃತ್ತ ನಾಗಿದ್ದೇನೆ ಎಂದು ಹೇಳುವ ಪ್ರೇರಕ ಮಾತುಗಳು ನೂರಾರು ಜನರ ಬದುಕನ್ನು ಬದಲಿಸಬಹುದು.

 ಇತರರಿಗೂ ಈ ಮಾತುಗಳು ಪ್ರೇರಣೆ ಆಗಲಿ ಎಂಬ ಉದ್ದೇಶದಿಂದ ಈ ಹಳೆಯ  ವಿಡಿಯೋವನ್ನು ಹಾಗೂ ಇಂದಿನ ರಜತ ಮಹೋತ್ಸವದ ಕಾರ್ಯಕ್ರಮವನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೇನೆ.

Keshav Amai

 ಇನ್ನೂ ಅವರ ಬಗ್ಗೆ ಸ್ವಲ್ಪ ಹೇಳುವುದಾದರೆ…ಬಹಳ ಬಡತನದಲ್ಲೇ ಹುಟ್ಟಿ ಬೆಳೆದ ಕೇಶವ್ ಅವರು  ಸುಮಾರು 20 ವರ್ಷ ವಯೋಮಾನದಲ್ಲಿ ಗ್ಲುಕೋಮಾ ದೃಷ್ಟಿ ದೋಷದಿಂದ ಬಳಲುತ್ತಾ ದಿನ ಕಳೆದಂತೆ   ತನ್ನ ಸಂಪೂರ್ಣ ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ.

 ಆದರೆ ಕೈಕಟ್ಟಿ ಕೂರದೇ ..1999 ರಲ್ಲಿ ಕೃಷಿಕರಿಗೆ ಉಪಯುಕ್ತವಾಗುವ ಹಾಗೂ ಕೃಷಿಗೆ ಸಹಕಾರಿಯಾಗುವ ಪರಿಕರಗಳ ಹೊಸ ಪರಿಕಲ್ಪನೆ ಯೊಂದಿಗೆ ಎಸ್. ಆರ್. ಕೆ  ಲ್ಯಾಡರ್ಸ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಪ್ರಾರಂಭದಲ್ಲಿ ಕೇವಲ ಓರ್ವ ಸಿಬ್ಬಂದಿಯಿಂದ  20  ಏಣಿಗಳನ್ನಷ್ಟೇ ತಯಾರಿಸಿ ಮಾರಾಟ ಮಾಡಲು ಪ್ರಾರಂಭಿಸಿದ ಈ ಸಂಸ್ಥೆಯು , ತನ್ನ ಸತತ ಪ್ರಯತ್ನ ಹಾಗೂ ಪರಿಶ್ರಮದಿಂದ  ಮಾತ್ರವಲ್ಲದೆ ಉತ್ತಮ ಗುಣಮಟ್ಟದ ಪರಿಕರಗಳನ್ನು ತಯಾರಿಸಿ  ಗ್ರಾಹಕರ ಮೆಚ್ಚುಗೆ ಪಡೆದು ಯಶಸ್ಸನ್ನ ಕಂಡಿದೆ.  ಇಂದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಕ್ಕೂ ಅಧಿಕ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಮಾಡಿ ಅವರ ಹಾಗೂ ಅವರ ಮನೆಯನ್ನು ಬೆಳಗಿಸಿದ್ದಾರೆ.

ಇಂದು ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಓಡಿಸ್ಸಾ  ರಾಜ್ಯಗಳಿಗೆ  ತನ್ನ ಸಂಸ್ಥೆಯಲ್ಲಿ ತಯಾರಿಸಿದ ಪರಿಕರಗಳನ್ನು  ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಮಾತ್ರವಲ್ಲದೆ  ದೇಶದ ಇತರ ರಾಜ್ಯಗಳಿಗೂ ತನ್ನ ವ್ಯವಹಾರವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.

ಪ್ರತಿಯೊಂದು ವಿಚಾರಗಳನ್ನು ಸ್ಮತಿ ಪಟಲದಲ್ಲೇ  ಇರಿಸುವ ವಿಶಿಷ್ಟ ಕಲೆಯನ್ನು ಕರಗತ ಮಾಡಿಕೊಂಡ ಇವರು ಡೈರಿಯಲ್ಲಿ ಬರೆಯುವ ಹವ್ಯಾಸ ಬೆಳೆಸಿಲ್ಲ ಅದಕ್ಕೆ ಅವಲಂಬಿತರಾಗಿಲ್ಲ ಎಂಬುದು ಇವರ ಅದ್ಭುತ ಸ್ಮರಣ ಶಕ್ತಿಗೆ ಉದಾಹರಣೆ. ಸಾವಿರಾರು ಜನರನ್ನು ಅವರ ಧ್ವನಿಯಿಂದಲೇ ಗುರುತಿಸ ಬಲ್ಲ ಅದ್ಭುತ ಜ್ಞಾನ ಇವರಲ್ಲಿದೆ. ವ್ಯಕ್ತಿಯ ಮಾತುಗಳಿಂದ  ಹಾಗೂ ನಡವಳಿಕೆಗಳಿಂದ ಅವರ ನಿಷ್ಠೆಯನ್ನು  ಹಾಗೂ ಅವರ ಕ್ಷಮತೆಯನ್ನು  ಗುರುತಿಸಬಲ್ಲ  ಚಾಕಚಕ್ಯತೆ ಇವರಲ್ಲಿದೆ. ಸದಾ ಪ್ರಯೋಗಶೀಲ ಪ್ರವೃತ್ತಿಯಲ್ಲಿರುವ ಇವರು ಕೃಷಿಕರಿಗೆ ಉಪಯುಕ್ತವಾಗುವ ವಿನೂತನ ಪರಿಕರಗಳ ಆವಿಷ್ಕಾರದಲ್ಲಿ  ಪರಿಣಿತರಾಗಿದ್ದಾರೆ. ತನ್ನ ಯಶಸ್ವಿಗೆ ಮೂಲ ಕಾರಣಿಭೂತರಾದ ತನ್ನ ಗ್ರಾಹಕರನ್ನು ಹಾಗೂ ಸಿಬ್ಬಂದಿಗಳನ್ನು  ದೇವರ ಸ್ವರೂಪದಲ್ಲಿ ಕಾಣುತ್ತಿದ್ದಾರೆ.

ಯಶಸ್ವಿ ಉದ್ಯಮದ ಜೊತೆಗೆ  ಇವರು ಯಶಸ್ವಿ ಕೃಷಿಕರು ಕೂಡ ಹೌದು. ಮಾತ್ರವಲ್ಲದೆ  ಕ್ಲಾಸ್ ಒನ್ ಪಿಡಬ್ಲ್ಯೂಡಿ  ಗುತ್ತಿಗೆದಾರರಾಗಿದ್ದು, ಅನೇಕ ಸರಕಾರಿ ಕೆಲಸಗಳನ್ನು ಅತ್ಯಂತ ಉತ್ತಮ ಗುಣಮಟ್ಟಗಳಿಂದ ಪ್ರಾಮಾಣಿಕವಾಗಿ ಮಾಡಿದ್ದಾರೆ.

ತಮ್ಮ ಬಡತನವೇ  ದುಡಿಮೆಗೆ ಹಾಗೂ ತನ್ನ ಎಲ್ಲಾ ಯಶಸ್ಸಿಗೆ ಮೂಲ ಕಾರಣವಾಗಿದೆ ಎಂದು ಹೇಳುವ ಕೇಶವ್ ಅವರು ತನ್ನ ಕೈಹಿಡಿದು ಬೆಳೆಸಿದ ಗುರುಗಳಿಗೆ, ತನ್ನ ಸಂಸ್ಥೆ ಯನ್ನು ಬೆಳೆಸಲು ಸಹಕರಿಸಿದ  ವ್ಯಕ್ತಿಗಳಿಗೆ, ತನ್ನ ಗ್ರಾಹಕ ಹಾಗೂ ಸಿಬ್ಬಂದಿ ವರ್ಗದವರನ್ನು ಮತ್ತು ಹಿತೈಷಿಗಳನ್ನು  ಮರೆಯದೆ  ಸರ್ವರನ್ನು ಈ ರಜತ ಸಂಭ್ರಮದ ಸಮಾರಂಭದಲ್ಲಿ ಗುರುತಿಸಿದ್ದು ಧನ್ಯತಾ ಭಾವದಿಂದ ಆದರಾತಿತ್ಯ  ನೀಡಿರುವುದು  ಅವರ ಸಮರ್ಪಣಾ ಭಾವಕ್ಕೆ ಶರಣು.

ರಜತ ಮಹೋತ್ಸವ ಸಮಾರಂಭದ   ಆಮಂತ್ರಣ ನೀಡುವ ಸಲುವಾಗಿ ಸೋಮವಾರ ನನ್ನ ಕಚೇರಿಯ ಬಳಿ ಬಂದು ಕರೆ ಮಾಡಿದರು ಅಂದು ನಾನು ಅನ್ಯ ಕಾರ್ಯ ಪರ ಊರಿನಲ್ಲಿದ್ದ ಕಾರಣ  ಆಮಂತ್ರಣವನ್ನು ಕಚೇರಿಯಲ್ಲಿ ಇಟ್ಟು ಹೋಗಲು ವಿನಂತಿಸಿದೆ. ಅದಕ್ಕೆ ಒಪ್ಪದ  ಕೇಶವ ಅವರು ಇನ್ನೊಂದು ಬಾರಿ ಬರುವುದಾಗಿ ಹೇಳಿದರು. ಮತ್ತೆ ಒಂದು  ಗುರುವಾರದಂದು ಕರೆ ಮಾಡಿ  ನಮ್ಮ ಕಚೇರಿಯ ಬಳಿ ಇದ್ದೇನೆ ಆಮಂತ್ರಣ ನೀಡಲು ಬರುತ್ತೇನೆ ಎಂದು ಹೇಳುವಾಗ  ಅಂದು ನಾನು ಬೆಂಗಳೂರಿನಲ್ಲಿ ಇರುವುದಾಗಿ ನಾವು ದಯವಿಟ್ಟು ವಾಟ್ಸಪ್ ಮೂಲಕ ಆಮಂತ್ರಣವನ್ನು ಕಳುಹಿಸಿ ಎಂದು ವಿನಂತಿಸಿದೆ.  ಅದಕ್ಕೆ ಪ್ರತಿಯಾಗಿ ಇಲ್ಲ ತಾವು ಬೆಂಗಳೂರಿನಿಂದ ಯಾವಾಗ ಬರುವುದು ಎಂದು ಕೇಳಿದರು ಆದಿತ್ಯವಾರ ಎಂದೆ ಹಾಗಾದರೆ ಆದಿತ್ಯವಾರ  ಭೇಟಿಯಾಗುತ್ತೇನೆ ಎಂದರು.. ಅದೇ ಪ್ರಕಾರವಾಗಿ   ಆದಿತ್ಯವಾರ  ಮತ್ತೆ ಕಚೇರಿಗೆ ಬಂದು ಆಮಂತ್ರಣವನ್ನು  ಖುದ್ದಾಗಿ ನೀಡಿ  ಅತ್ಯಂತ ಪ್ರೀತಿಯಿಂದ  ಆಮಂತ್ರಿಸಿದರು.  ಇಂಥ ಪ್ರೀತಿ ವಿಶ್ವಾಸಕ್ಕೆ ಎಷ್ಟು ಧನ್ಯವಾದ ಸಮರ್ಪಿಸಿದರು ಕಡಿಮೆಯೇ.

ಅವರ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ  ವಂದನೆಗಳನ್ನು ಅರ್ಪಿಸುತ್ತಾ ಕೇಶವ ಅಮೈ ಅವರಿಗೆ ಶುಭ ಹಾರೈಸುತ್ತಿದ್ದೇನೆ. ಅವರಿಗೆ ಹಾಗೂ ಅವರ  ಕುಟುಂಬಕ್ಕೆ ಹಾಗೂ ಅವರ ಸಂಸ್ಥೆಗೆ  ಸರ್ವ ರೀತಿಯ ಯಶಸ್ಸನ್ನು  ಹಾಗೂ ಸುಖ ಸಮೃದ್ಧಿಯನ್ನು ದೇವರು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.

ಅಧ್ಯಕ್ಷರು

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು

25-05-2024

Leave a comment