ಪುತ್ತೂರು ಉಮೇಶ್ ನಾಯಕ್ ಪರಿಚಯ 

ಪುತ್ತೂರಿನ ಯುವ ಸಾಹಿತಿ, ಗ್ರಾಮ ಸಾಹಿತ್ಯದ ರೂವಾರಿ, ಜಾದೂಗಾರ ಪುತ್ತೂರು ಉಮೇಶ್ ನಾಯಕ್ ರವರು ಸಾಹಿತ್ಯ ಸೇವೆ, ಸಮಾಜ ಸೇವೆ, ಸಂಘ ಸಂಸ್ಥೆಗಳು, ಹೀಗೆ ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಒಬ್ಬ ಚತುರ ಸಂಘಟನಾಕಾರನೂ ಹೌದು. 

ಆಗಷ್ಟ್ 31, 1973 ರಂದು ಪುತ್ತೂರಿನ ಶ್ರೀ ಜಗನ್ನಾಥ ನಾಯಕ್ ಮತ್ತು ಶ್ರೀಮತಿ ಜಯ ನಾಯಕ್ ದಂಪತಿಗಳ ಪುತ್ರನಾಗಿ ಜನಿಸಿದ ಉಮೇಶ್ ನಾಯಕ್ ಅವರು ಹುಟ್ಟಿ ಬೆಳೆದದ್ದು ಪುತ್ತೂರಿನ ದರ್ಬೆ ಎಂಬಲ್ಲಿ.  

ಶಾಲಾ ದಿನಗಳಿಂದಲೇ ಕಲೆ ಸಾಹಿತ್ಯ ಸಮಾಜ ಸೇವೆ ಕಡೆ ಒಲವು ಬೆಳೆಸಿಕೊಂಡ ಇವರು ಪುತ್ತೂರಿನ ಅನೇಕ ಹಿರಿಯ ಕವಿಗಳಿಂದ ಸ್ಫೂರ್ತಿ ಪಡೆದವರು. ಪುತ್ತೂರಿನ ಪ್ರತಿಷ್ಠಿತ ವಿವೇಕಾನಂದ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದು ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲದಿಂದ ಕನ್ನಡ ಎಂ.ಎ ಯಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದಿದ್ದಾರೆ. 

ಪುತ್ತೂರು ಉಮೇಶ್ ನಾಯಕ್

ಪುತ್ತೂರು ಉಮೇಶ್ ನಾಯಕ್ ಇವರು ವೃತ್ತಿಯಲ್ಲಿ ಉದ್ಯಮಿಯಾಗಿದ್ದು, ಶ್ರೀರಾಮ್  ಶೇರ್ಸ್ ಅಂಡ್ ಫೈನಾನ್ಸಿಯಲ್ ಕನ್ಸಲ್ಟೆಂಟ್ ಎಂಬ ಶೇರು ಉದ್ಯಮವನ್ನು ಪುತ್ತೂರಿನಲ್ಲಿ ನಡೆಸುತ್ತಿದ್ದಾರೆ. 

ಇವರು ಉದಯೋನ್ಮುಖ ಯುವ ಕವಿಯಾಗಿದ್ದು, ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸ್ಥಳ ಪುರಾಣ  ಸಂಗ್ರಹದ  ‘ಸ್ವಯಂಭೂ ಮಹಾಲಿಂಗೇಶ್ವರ’ ಎಂಬ ಕೃತಿಯನ್ನು ರಚಿಸಿದ್ದು, ಇದು ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಿಂದ ಪ್ರಕಟಗೊಂಡಿರುತ್ತದೆ.

“ಕನಸಿನ ಕವನಾಮೃತ” ಮತ್ತು “ಮನಸ್ಸಿನ ಭಾವಾಮೃತ” ಎಂಬ ಎರಡು ಕವನ ಸಂಕಲನ ಗಳನ್ನು ಹಾಗೂ ಭಕ್ತಿಗೀತೆಗಳ 3 ಸಿ ಡಿ ಗಳನ್ನು ಉಮೇಶ್ ನಾಯಕ್ ಅವರು ರಚಿಸಿದ್ದಾರೆ. ಪ್ರಸ್ತುತ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ  ಸೇವೆಯನ್ನು ಸಲ್ಲಿಸುತ್ತಿದ್ದು ಸಕ್ರೀಯ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ.

ವಿದ್ಯಾರ್ಥಿಗಳಲ್ಲಿ  ಸಾಹಿತ್ಯ ಅಭಿಮಾನವನ್ನು ಬೆಳೆಸುವ ನಿಟ್ಟಿನಲ್ಲಿ ಹಾಗೂ ಗ್ರಾಮ ಗ್ರಾಮದಲ್ಲೂ ಕನ್ನಡದ ಕಂಪನ್ನು ಪಸರಿಸುವ ನಿಟ್ಟಿನಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದಲ್ಲಿ ಪುತ್ತೂರು ತಾಲೂಕಿನ 32 ಗ್ರಾಮದಲ್ಲಿ   ‘ಗ್ರಾಮ ಸಾಹಿತ್ಯ ಸಂಭ್ರಮ ‘ ಹಮ್ಮಿಕೊಂಡು ಯಶಸ್ವಿಯಾಗಿ ನಡೆಸುತ್ತಿದ್ದಾರೆ.

ಪುತ್ತೂರಿನ ರೋಟರಿ ಕ್ಲಬ್ ಪುತ್ತೂರು ಯುವ ಇದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ತನ್ನನ್ನು ತಾನು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದು, ಈವರೆಗೆ 18 ಮಂದಿ ಅನಾಥ ನಿರ್ಗತಿಕರನ್ನು ನಿರ್ಗತಿಕರ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದಾರೆ.  ಮೂವರು ಎಚ್.ಐ.ವಿ ಪೀಡಿತ ಮಕ್ಕಳನ್ನು ಎಚ್.ಐ.ವಿ ಪುನರ್ವಸತಿ ಕೇಂದ್ರಕ್ಕೆ ಸೇರಿಸಿ ವಿದ್ಯಾಭ್ಯಾಸದ ವ್ಯವಸ್ಥೆಯನ್ನು ಸಹ ಮಾಡಿದ್ದಾರೆ.

ಮಣಿಪಾಲದ ಪ್ಯಾರಾ ಒಲಂಪಿಕ್ ಅಂತರಾಷ್ಟ್ರೀಯ ಈಜುಗಾರ್ತಿ ಅರ್ಚನ ಜೈ ವಿಟ್ಟಲ್, ಮೈಸೂರಿನ ಕೀಪ್ಯಾಡ್ ಕಲಾವಿದ  ಗಣೇಶ್ ಭಟ್  ಹಾಗೂ ಸಹೋದರ ಲಿಮ್ಕಾ ದಾಖಲೆ ಸುರೇಶ್ ನಾಯಕ್ ಸೇರಿದಂತೆ ಮೂವರು ವಿಕಲಚೇತನ ಪ್ರತಿಭೆಗಳನ್ನು ವಿಶ್ವ ಅಂಗವಿಕಲರ ದಿನಾಚರಣೆಯ ರಾಷ್ಟ್ರ ಪ್ರಶಸ್ತಿ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಸಹೋದರ ಸುರೇಶ್ ನಾಯಕ್ ಜೊತೆ ದೇಶದಾದ್ಯಂತ 500ಕ್ಕೂ ಅಧಿಕ ಉಚಿತ ಜಾದು ಪ್ರದರ್ಶನ ನೀಡಿ ಬುದ್ಧಿಮಾಂದ್ಯತೆ ಹಾಗೂ ಸ್ವಚ್ಛ ಭಾರತ ಅಭಿಯಾನ ಜಾಗೃತಿ ಮೂಡಿಸಿದ್ದಾರೆ. ಇವರ ಈ ಸೇವೆಗಾಗಿ ರೋಟರಿ ಅನ್ಸಂಗ್ ಹೀರೋ ಎಂಬ ಪ್ರಶಸ್ತಿಗೂ ಭಜನರಾಗಿದ್ದಾರೆ. 

ಪುತ್ತೂರು ಉಮೇಶ್ ನಾಯಕ್ ಅವರ ಪ್ರಕಟಿತ ಕೃತಿಗಳು 

ಕವನ ಸಂಕಲನ 

  • ಕನಸಿನ ಕವನಾಮೃತ
  • ಮನಸ್ಸಿನ ಭಾವಾಮೃತ

ಸಂಗ್ರಹ ಕೃತಿ

ಸ್ವಯಂಭೂ ಮಹಾಲಿಂಗೇಶ್ವರ

Leave a comment