ಬರೆಪ್ಪಾಡಿ ಯಲ್ಲಿ ಹೊಯ್ಸಳ ಕಾಲದ 800 ವರ್ಷ ಹಿಂದಿನ ವಿಗ್ರಹಗಳು ಪತ್ತೆ ಹಾಗೂ 584 ವರ್ಷ ಹಿಂದಿನ ಕನ್ನಡ ಶಾಸನದ ಅಧ್ಯಯನ
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆಯ ಕುದ್ಮಾರ್ ಗ್ರಾಮದ ಬರೆಪ್ಪಾಡಿ ಎಂಬಲ್ಲಿ ಶ್ರೀ ಪಂಚಲಿಂಗೇಶ್ವರ – ಕೇಪುಳೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಜೀರ್ಣೋದ್ಧಾರದ ಸಂದರ್ಭದಲ್ಲಿ ಹಾಗೂ ದೇವರ ತೀರ್ಥದ ಬಾವಿಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸುಮಾರು 800 ವರ್ಷ ಹಳೆಯದು ಎನ್ನಲಾದ ಹೊಯ್ಸಳ ಕಾಲದ ಸುಮಾರು 9 ಲೋಹದ ವಿಗ್ರಹಗಳು ಪತ್ತೆಯಾಗಿದೆ. ಜೊತೆಗೆ ದೇವಸ್ಥಾನದ ಒಳ ಆವರಣದದಲ್ಲಿ ಸುಮಾರು 584 ವರ್ಷ ಹಳೆಯ ವಿಜಯನಗರ ಕಾಲದ 2 ಕನ್ನಡ ಶಿಲಾ ಶಾಸನ ಸ್ಥಾಪಿಸಿದ ಮಹತ್ವ ಮರು ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ‘ಶಾಸನ -ಶೋಧನ -ಅಧ್ಯಯನ ಸಂರಕ್ಷಣಾ’ ಯೋಜನೆಯಡಿಯಲ್ಲಿ ಯೋಜನೆಯ ಪ್ರಮುಖ ಅಧ್ಯಯನಕಾರರಾದ ಇತಿಹಾಸ ತಜ್ಞ ಡಾ. ಉಮಾನಾಥ್ ಶೆಣೈ ಅವರ ನೇತೃತ್ವದಲ್ಲಿ ವಿಗ್ರಹಗಳ ಹಾಗೂ ಶಾಸನದ ಅಧ್ಯಯನ ನಡೆಸಲಾಯಿತು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ಅಧ್ಯಯನದಲ್ಲಿ ಸಹಕರಿಸಿದರು.
ದೇವಸ್ಥಾನದ ಮಾಜಿ ಅಧ್ಯಕ್ಷರಾದ ಶ್ರೀ ವಿಠಲ ಗೌಡ ಭಜಕರಾದ ಲೋಕೇಶ್ ಗೌಡ ಅವರ ಮನವಿ ಮೇರೆಗೆ ಮೇ 29ರಂದು ಶಾಸನ ಹಾಗೂ ವಿಗ್ರಹದ ಅಧ್ಯಯನವನ್ನು ದೇವಸ್ಥಾನದ ಬಾಲಾಲಯದ ಮುಂಭಾಗದಲ್ಲಿ ನಡೆಸಲಾಯಿತು.
ಶಾಸನವನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ, ಸುಮಾರು 23 ಸಾಲು ಓದುವ ಸಮಯದಲ್ಲಿ ದೇವಸ್ಥಾನದ ಅರ್ಚಕರಾದ ಜನೇಶ್ ಭಟ್ ಅವರು ಈ ಹಿಂದೆ ಸುಬ್ರಹ್ಮಣ್ಯದ ನಿವೃತ್ತ ಉಪನ್ಯಾಸಕರಾದ ಡಾ.ಕೆ ಎಸ್. ಎನ್ ಉಡುಪ ಅವರು ಪ್ರಾಕ್ತನ ಇಲಾಖೆಯ ನೋಂದಣಿ ಸಂಖ್ಯೆ 116,ಎ ಆರ್ 246 ರ ಪ್ರಕಾರ 1930-31 ರಲ್ಲಿ ಅಧ್ಯಯನ ಹಾಗೂ ನೋಂದಣಿ ಆಗಿರುವ ಶಾಸನದ ಪೂರ್ಣ ಪಾಠದ ಪ್ರತಿಯನ್ನು ಅವರು ನೀಡುವಾಗ, ಈ ಶಾಸನವು ಈ ಮೊದಲೇ ಪ್ರಾಕ್ತನ ಇಲಾಖೆಯಲ್ಲಿ ನೋಂದಣಿ ಆದ ವಿಷಯ ಬೆಳಕಿಗೆ ಬಂದಿತು. ಬಳಿಕ ಆ ಪೂರ್ಣ ಪಾಠವನ್ನೇ ಸಭೆಯಲ್ಲಿ ಓದಿ ಶಾಸನ ಸ್ಥಾಪಿಸಿದ ಉದ್ದೇಶ ಹಾಗೂ ವಿವರಗಳನ್ನು ತಿಳಿಸಲಾಯಿತು.
ಶಾಸನದ ಸ್ವರೂಪ
ಹಳೆಯ ದೇವಸ್ಥಾನದ ಆವರಣದಲ್ಲಿ ಎರಡು ಶಿಲಾ ಶಾಸನಗಳು ಪತ್ತೆಯಾಗಿದ್ದು, ಶಾಸನವು ಶಿರೋ ಭಾಗದಿಂದ ಭೂಮಿಯ ಒಳಗೆ ನೆಡುವ ಜಾಗ ಸೇರಿ ಸುಮಾರು 37.6 ಇಂಚು ಉದ್ದ ಹಾಗೂ 8.6 ಇಂಚು ಅಗಲ, 6.6 ಇಂಚು ದಪ್ಪ ಇದೆ. ಭೂಮಿಯ ಒಳಗೆ ಹೂತು ಹಾಕುವ ಶಾಸನದ ಭಾಗವು 7.6 ಇಂಚು ಎತ್ತರವಿದೆ. ಶಾಸನದ ಪಠ್ಯ ಬರೆದ ಭಾಗವು 24 ಇಂಚು ಇದ್ದು, ಅದರ ಮೇಲ್ಭಾಗ 6 ಇಂಚು ವರೆಗೆ ಅರ್ಧಚಂದ್ರಾಕೃತಿಯಲ್ಲಿ ಇದೆ. ಶಾಸನದ ಶಿರೋಭಾಗದ ಬಲಬದಿಯಲ್ಲಿ ಅರ್ಧ ಚಂದ್ರ ಹಾಗೂ ಒಂದು ದೀಪ ಎಡ ಭಾಗದಲ್ಲಿ ಸೂರ್ಯ ಹಾಗೂ ಒಂದು ದೀಪ ಹಾಗೂ ಶಿರೋ ಭಾಗದಲ್ಲಿ ಒಂದು ಗೊಂಡೆ ಹಾಗೂ ಮಧ್ಯಭಾಗದಲ್ಲಿ ಪಾಣಿ ಪೀಠ ಸಹಿತ ಶಿವಲಿಂಗದ ಆಕೃತಿಯನ್ನು ಕೆತ್ತಲಾಗಿದೆ.
ಮೊದಲನೇ ಶಾಸನದ ಎದುರು ಭಾಗದಲ್ಲಿ ಕನ್ನಡ ಲಿಪಿಯ ಅಕ್ಷರಗಳನ್ನು ಸುಂದರವಾಗಿ ಕೆತ್ತಲಾಗಿದ್ದು, 30 ಸಾಲುಗಳು ಇವೆ . ಶಾಸನದ ಹಿಂಭಾಗದಲ್ಲಿ 34 ಸಾಲುಗಳಿದ್ದು ಸ್ಪಷ್ಟವಾಗಿ ಕೆತ್ತಿಲ್ಲ.
ಪತ್ತೆಯಾದ ಇನ್ನೊಂದು ಶಾಸನವೂ ಇದೇ ರೀತಿಯಲ್ಲಿ ಇದ್ದು, ಶಾಸನದ ಶಿರೋಭಾಗದಲ್ಲಿ ಸೂರ್ಯ ಚಂದ್ರ ಹಾಗೂ ಪಾಣಿಪೀಠ ಸಹಿತ ಶಿವಲಿಂಗದ ಆಕೃತಿ ಗಳನ್ನು ಮಾತ್ರ ಕೆತ್ತಲಾಗಿದೆ.
ಎರಡನೇ ಶಾಸನದ ಹಿಂಭಾಗದಲ್ಲಿ 12 ಸಾಲುಗಳನ್ನು ಕೆತ್ತಲಾಗಿದ್ದು, ಕೆತ್ತನೆಯು ಸ್ಪಷ್ಟವಾಗಿಲ್ಲ. ಶಾಸನದ ಮುಂಭಾಗದಲ್ಲಿ ಯಾವುದೇ ಅಕ್ಷರಗಳನ್ನು ಬರೆದಿಲ್ಲ. ಇತ್ತೀಚೆಗೆ ಯಾರೋ ‘ನಮಃ’ ಎಂಬ ಇತ್ತೀಚಿಗಿನ ಕನ್ನಡ ಲಿಪಿಯಲ್ಲಿ ಬರೆದ ಹಾಗೆ ಕಂಡು ಬರುತ್ತದೆ.
ಎರಡು ಶಾಸನದಲ್ಲಿ, ಒಂದನೇ ಶಾಸನದ ಮುಂಭಾಗದಲ್ಲಿ ಇರುವ 30 ಸಾಲುಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು ಅತ್ಯಂತ ಸುಂದರವಾಗಿ ಕೆತ್ತಲಾಗಿದೆ. ಹಿಂಭಾಗದಲ್ಲಿ ಇರುವ 34 ಸಾಲುಗಳ ಪೈಕಿ 3 ಸಾಲುಗಳು ಸಂಪೂರ್ಣ ನಷ್ಟವಾಗಿದೆ.
ಎರಡನೇ ಶಾಸನದ ಮುಂಭಾಗವನ್ನು ಇತ್ತೀಚಿನ ದಿನಗಳಲ್ಲಿ ಎಳನೀರು ಒಡೆಯಲು ಅಥವಾ ತೆಂಗಿನಕಾಯಿ ಒಡೆಯಲು ಉಪಯೋಗಿಸಿ ಕತ್ತಿಯಿಂದ ತುಂಡರಿಸಿದ ಗೆರೆಗಳು ಹಾಗೂ ಕಲ್ಲಿನ ಕೆಲ ಸಣ್ಣ ಭಾಗ ತುಂಡಾಗಿ ಭಿನ್ನವಾದಂತೆ ಕಂಡುಬರುತ್ತದೆ. ಈ ಎರಡನೇ ಶಾಸನದ ಮುಂಭಾಗದಲ್ಲಿ ಯಾವುದೇ ಅಕ್ಷರಗಳನ್ನು ಕೆತ್ತಲಾಗಿಲ್ಲ.
ಶಾಸನದ ಪಠ್ಯ
ಒಟ್ಟು 76 ಸಾಲುಗಳಿರುವ ಈ ಎರಡು ಶಾಸನವು ಕನ್ನಡ ಲಿಪಿಯಲ್ಲಿದ್ದು, ಸ್ವಸ್ತಿ ಶ್ರೀ ಗಣಪತಯೇ ನಮಃ ಎಂಬ ಪ್ರಾರ್ಥನಾ ಶ್ಲೋಕದಿಂದ ಪ್ರಾರಂಭಗೊಳ್ಳುತ್ತದೆ. ಜಯಾಭ್ಯುದಯ ಶಾಲಿವಾಹನ ಶಕ 1364 ಆಷಾಢ ಶುದ್ಧ 1, ಮಂಗಳವಾರ ರೌದರಿ ನಾಮ ಸಂವತ್ಸರದಲ್ಲಿ ಸ್ಥಾಪಿಸಿದ ಶಾಸನ ಇದಾಗಿದೆ ಅಂದರೆ ಸುಮಾರು ಕ್ರಿ. ಶ 1442, ಮೇ 31 ರಂದು ಶ್ರೀಮನ್ಮಹಾರಾಜಾಧಿರಾಜ ಪರಮೇಶ್ವರ ಶ್ರೀ ವೀರ ಪ್ರತಾಪ ಗಜಬ್ಯೇಂಟಗಾರ ದೇವರಾಯ ಮಹಾರಾಯರು ವಿಜೆ ನಗರಿಯ ಸಿಂಹಾಸನಾಧಿಪ ಆಗಿರುವ ಕಾಲಮಾನದಲ್ಲಿ ಶಾಸನ ಸ್ಥಾಪಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಈ ಸಮಯದಲ್ಲಿ ಬಾರಕೂರು ಹಾಗೂ ಮಂಗಳೂರು ರಾಜ್ಯವನ್ನು ಅಣ್ಣಪ್ಪ ಆಳುತ್ತಿದ್ದು, ಕಡಬ ರಾಜ್ಯವನ್ನು ರಾಮರಸರು ಆಳುತ್ತಿದ್ದು, ರಾಮರಸರು ಸ್ಥಾಪಿಸಿದ ಧರ್ಮಶಾಸನ ಎಂದು ಬರೆದಿದ್ದು, ಮಹಾಪ್ರದಾನ ಅಣ್ಣಪ್ಪ ದಣ್ಣಾಯಕ ಎಂದು ಉಲ್ಲೇಖವಿದ್ದು, ಶಾಸನದಲ್ಲಿ ಸ್ವಯಂಭು ಲಿಂಗೇಶ್ವರ ದೇವರ ಸನ್ನಿಧಿ ಎಂಬ ಉಲ್ಲೇಖವಿದೆ.
ಈ ಶಾಸನದಲ್ಲಿ ದೇವರ ನಿತ್ಯ ನೈಮೆತ್ತಿಕಗಳಿಗೆ ಅನೇಕ ವ್ಯವಸ್ಥೆಗಳನ್ನು ವಿಜಯನಗರದ ಅರಸರ ಕಾಲದಲ್ಲಿ ಮಾಡಿದ ಉಲ್ಲೇಖವಿದ್ದು, ಮುಖ್ಯವಾಗಿ ಬ್ರಾಹ್ಮಣ ಸಂತರ್ಪಣೆಗೆ ಪ್ರತಿದಿನ ತುಪ್ಪ,ಮಜ್ಜಿಗೆ,ವೀಳ್ಯದೆಲೆ ಹಾಗೂ ದೇವರ ನಿತ್ಯ ನೈಮೆತ್ತಿಕಗಳು ಸಾಂಗವಾಗಿ ನಡೆಯುವ ವ್ಯವಸ್ಥೆಗಾಗಿ ಸ್ಥಳೀಯ /ಗ್ರಾಮದ ದಾನಿಗಳ ಜಮೀನಿನಲ್ಲಿ ಬೆಳೆಯುವ ಭತ್ತ ಮೂಡೆ ಅಳತೆಯ ಲೆಕ್ಕದಲ್ಲಿ ದೇವಸ್ಥಾನಕ್ಕೆ ನೀಡುವ ಕುರಿತು ಬರೆದಿದ್ದು, ಈ ಶಾಸನ ಬರೆಯುವಾಗ ಸಾಕ್ಷಿ ‘ಮುದಿಯ ನಾಡ ಕುಂಡು ಪಿoರ್ನಜಿಲನಾಥ’ ಎಂದು ಬರೆದಿದ್ದು, ‘ದೇವನ ಬರಹ’ ಎಂದು ಮುಕ್ತಾಯವಾಗಿದೆ.
ಪತ್ತೆಯಾದ ವಿಗ್ರಹಗಳು
ಹಳೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಈಶಾನ್ಯ ಭಾಗದಲ್ಲಿದ್ದ ದೇವರ ಬಾವಿಯಲ್ಲಿ ಸುಮಾರು 9 ಪಂಚಲೋಹದ/ಲೋಹದ ವಿಗ್ರಹಗಳು ಪತ್ತೆಯಾಗಿದ್ದು,ವರಾಹ ಲಕ್ಷ್ಮಿ ನಾರಾಯಣ, ಚತುರ್ಭುಜ ಲಕ್ಷ್ಮೀನಾರಾಯಣ/ವಿಷ್ಣು , ಸೊಂಟದಲ್ಲಿ ಕೈಯನ್ನಿರಿಸಿದ ವೆಂಕಟರಮಣ/ವಿಷ್ಣು, ದುರ್ಗೆ, ಸ್ತ್ರೀ ಹಾಗೂ ಪುರುಷ ಜೋಡಿ ದೈವ, ವಿಗ್ರಹದಿಂದ ರುಂಡ ಬೇರ್ಪಟ್ಟಿರುವ ಒಂದು ಮೂರ್ತಿ, ದ್ವಿಭುಜ ನವನೀತ ಕೃಷ್ಣ / ಗೋಪಾಲಕೃಷ್ಣ ಹಾಗೂ ಜಿಂಕೆಯನ್ನು ಕೈಯಲ್ಲಿ ಹಿಡಿದ ದೇವರ ಉತ್ಸವ ಮೂರ್ತಿ ಪತ್ತೆಯಾಗಿದ್ದು, ಇವುಗಳಲ್ಲಿ ಹೆಚ್ಚಿನ ಮೂರ್ತಿಗಳು ಭಿನ್ನ ಬಂದಿರುತ್ತದೆ ( ತುಂಡಾಗಿರುತ್ತದೆ). ಹಲವು ಶತಮಾನಗಳ ಹಿಂದೆ ಯಾವುದೋ ಕಾರಣಗಳಿಂದ ಈ ವಿಗ್ರಹಗಳನ್ನು ಜಲ ಸ್ತಂಭನ ಮಾಡಿರಬಹುದು ಎಂದು ಅಭಿಪ್ರಾಯ.
ಈ ಪುರಾತನ ವಿಗ್ರಹಗಳನ್ನು ಪರೀಕ್ಷಿಸಿ ನೋಡುವಾಗ ಇವುಗಳು ಶಾಸನ ಸ್ಥಾಪಿಸುವ ಸುಮಾರು 200 ವರ್ಷಗಳ ಹಿಂದೆ ಹೊಯ್ಸಳರ ಕಾಲಮಾನದಲ್ಲಿ ಪ್ರತಿಷ್ಠಾಪನೆ ಆಗಿರಬಹುದು, ವಿಗ್ರಹ ಹಾಗೂ ಶಾಸನಗಳನ್ನು ಇನ್ನೂ ಹೆಚ್ಚಿನ ಅಧ್ಯಯನ ಮಾಡಿದಲ್ಲಿ ಅನೇಕ ಮಹತ್ವದ ವಿಚಾರಗಳು ಬೆಳಕಿಗೆ ಬರಬಹುದು ಎಂದು ಶಾಸನ ತಜ್ಞ ಹಾಗೂ ವಿಗ್ರಹ ತಜ್ಞರಾದ ಡಾ. ಉಮಾನಾಥ ಶೆಣೈ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕನ್ನಡ ಭಾಷೆ ಹಾಗೂ ಲಿಪಿಯ ಪ್ರಾಚೀನತೆಯ ಬಗ್ಗೆ ಬೆಳಕನ್ನು ಚೆಲ್ಲುವ ಹಾಗೂ ಕ್ಷೇತ್ರದ ಗತವೈಭವವನ್ನು ಸಾರುವ ಈ ಜ್ಞಾನ ನಿಧಿಗಳಾದ ಶಾಸನಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಯನಕಾರರಿಗೆ ಉಪಯೋಗ ಆಗುವ ನಿಟ್ಟಿನಲ್ಲಿ ಮಾತ್ರವಲ್ಲದೆ ಕ್ಷೇತ್ರವನ್ನು ‘ಅಧ್ಯಯನ ತಾಣ’ವಾಗಿ ಮಾಡುವ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಳ್ಳಲಾದ ವಿನೂತನ ಯೋಜನೆ “ಶಾಸನ-ಶೋಧನ- ಸಂರಕ್ಷಣಾ” ಯೋಜನೆಯಡಿಯಲ್ಲಿ ದೇವಸ್ಥಾನದ ಸಮಿತಿಯವರು ಒಪ್ಪಿದ್ದಲ್ಲಿ, ಶಾಸನ ಮಂಟಪವನ್ನು ನಿರ್ಮಿಸಿ ಕೊಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉಮೇಶ್ ನಾಯಕ್ ಅವರ ಆಶಯ.
ಶಾಸನ ಹಾಗೂ ವಿಗ್ರಹಗಳ ಅಧ್ಯಯನ ಮಾಡುವ ಸಂದರ್ಭದಲ್ಲಿ ದೇವಸ್ಥಾನದ ಮಾಜಿ ಅಧ್ಯಕ್ಷರಾದ ವಿಠಲ ಗೌಡ, ದೇವಸ್ಥಾನ ಸಮಿತಿಯ ಮಾಜಿ ಸದಸ್ಯರಾದ ಜತ್ತಪ್ಪ ರೈ, ಸಮಿತಿಯ ಸದಸ್ಯರಾದ ದಾಮೋದರ, ಭಜಕರಾದ ಹರ್ಷಿತ ಮುದ್ಯ, ಹೇಮಂತ ಲೋಕೇಶಗೌಡ ಹಾಗೂ ಅರ್ಚಕರಾದ ಜನೇಶ ಭಟ್ ಅವರು ಉಪಸ್ಥಿತರಿದ್ದು ಅನೇಕ ಉಪಯುಕ್ತ ಮಾಹಿತಿಗಳನ್ನು ನೀಡಿದರು.
ಕ್ಷೇತ್ರದ ಐತಿಹ್ಯ
ಗ್ರಾಮದ ಹಿರಿಯರ ಅನುಭವ ಪ್ರಕಾರ ಈ ಪಂಚಲಿಂಗೇಶ್ವರ ದೇವರ ಸಾನಿಧ್ಯ ಪಾಂಡವ ಪ್ರತಿಷ್ಠೆ ಆಗಿದ್ದು, ಯುಧಿಷ್ಠಿರ, ಅರ್ಜುನ, ಭೀಮ, ನಕುಲ,ಸಹದೇವ ಒಬ್ಬೊಬ್ಬರು ಒಂದೊಂದು ಲಿಂಗವನ್ನು ಪ್ರತಿಷ್ಠೆ ಮಾಡಿ ಬಳಿಕ ಪುಣ್ಯ ಜಲಾಭಿಷೇಕ ಮಾಡುವ ಕುರಿತು ಧರ್ಮರಾಯನು ವಾಯುಪುತ್ರನಾದ ಭೀಮನನ್ನು ವಾಯು ವೇಗದಲ್ಲಿ ಪವಿತ್ರ ಗಂಗಾಜಲ ತರಲು ಕಾಶಿಗೆ ಕಳುಹಿಸಿದ. ಆತ ಕಷಿಯಿಂದ ಬರಲು ವಿಳಂಬವಾದಾಗ ಪಂಚಲಿಂಗೇಶ್ವರನ ಪೂಜೆಯನ್ನು ಪೂರೈಸಿದ್ದರು. ಭೀಮನು ಕಾಶಿಯಿಂದ ಮರಳಿ ಬರುವಾಗ ದೇವರ ಪೂಜೆ ಆಗಿರುವ ವಿಚಾರ ತಿಳಿದು ಕ್ರೋಧಗೊಂಡು ಭೂಮಿಗೆ ಕಿರುಬೆರಳೂರಿ ಜೋರಾಗಿ ಅದುಮಿದಾಗ ದೇವರ ಬಾವಿ ನಿರ್ಮಾಣವಾಯಿತು, ಬಳಿಕ ಕಾಶಿಯಿಂದ ತಂದ ಗಂಗೆಯನ್ನು ಭೀಮನು ಈ ಬಾವಿಯಲ್ಲಿ ಸುರಿದನು ಎಂಬ ಪ್ರತೀತಿ. ಪ್ರಸ್ತುತ ಈ ಬಾವಿಯು ಪಂಚಲಿಂಗೇಶ್ವರ ದೇವರ ಈಶಾನ್ಯ ಭಾಗದಲ್ಲಿದ್ದು ಬಹಳ ಔಷಧೀಯ ಗುಣವುಳ್ಳ ತೀರ್ಥ ಎಂಬ ಪ್ರತೀತಿ ಇದೆ. ಈ ತೀರ್ಥ ಬಾವಿಯ ಕಲಶ ತೀರ್ಥ ಸ್ನಾನ ಮಾಡಿದಲ್ಲಿ ಚರ್ಮರೋಗಾದಿಗಳು ಮುಖ್ಯವಾಗಿ ಕೆಡು ಉಪಶಮನವಾಗುವುದೆಂಬ ನಂಬಿಕೆ ಇದ್ದು, ಇಂದಿಗೂ ಶ್ರಾವಣ ಶನಿವಾರದಂದು ತೀರ್ಥ ಸ್ನಾನಕ್ಕಾಗಿ ಸಾವಿರಾರು ಜನ ಇಲ್ಲಿಗೆ ಬರುತ್ತಿದ್ದಾರೆ ಹಾಗೂ ಪ್ರಯೋಜನ ಕಂಡಿದ್ದಾರೆ ಎನ್ನಲಾಗುತ್ತಿದೆ. ಮುಖ್ಯವಾಗಿ ದೇಹದಲ್ಲಿರುವ ಕೆಡು ಈ ತೀರ್ಥ ಸ್ನಾನದಿಂದ ಶೀಘ್ರ ಉಪಶಮನವಾಗುವುದೆಂಬ ನಂಬಿಕೆ. ಈ ಬಾವಿಯ ಆಳವು ಕೇವಲ 10 ಅಡಿ ಮಾತ್ರವಿದ್ದು, ಯಾವುದೇ ಕಾಲದಲ್ಲೂ ನೀರು ಬತ್ತಿ ಹೋಗದಿರುವುದೇ ಒಂದು ವಿಶೇಷ.
ಹಿಂದೆ, ದೇವಸ್ಥಾನದ ಉತ್ತರ ಭಾಗದಲ್ಲಿ ‘ದಾರಂದ ಕೆರೆ’ ಯನ್ನು ಭೀಮನು ನಿರ್ಮಾಣ ಮಾಡುವ ಸಮಯದಲ್ಲಿ ಅಲ್ಲಿದ್ದ ಮಣ್ಣನ್ನು ಹಾರೆಯಿಂದ ಎತ್ತಿ ಹಾಕುವ ಸಮಯದಲ್ಲಿ ಬಿಸಾಡಿದ ಮಣ್ಣಿನ ರಾಶಿಯು ‘ದೇವರ ಗುಡ್ಡ’ವಾಗಿ ಮಾರ್ಪಾಡಾಯಿತು ಅದರಿಂದ ಬಿದ್ದ ಸ್ವಲ್ಪ ಮಣ್ಣು ‘ತುಳಸಿ ಗುಡ್ಡ’ವಾಯಿತು, ಕೆಲಸವಾದ ಬಳಿಕ ಹಾರೆಯನ್ನು ತೊಳೆಯುವಾಗ ಅದರಲ್ಲಿದ್ದ ಮಣ್ಣನ್ನು ಚೆಲ್ಲಿದಾಗ ‘ನಡುಗುಡ್ಡೆ’ ಸೃಷ್ಟಿಯಾಯಿತು ಎಂಬ ಪ್ರತೀತಿ . ಪ್ರಸ್ತುತ ಈ ಮೂರೂ ಗುಡ್ಡಗಳು ದೇವಸ್ಥಾನದ (ಪಶ್ಚಿಮ ಭಾಗ ) ಹಿಂಭಾಗದಲ್ಲಿವೆ. ಪ್ರಸ್ತುತ ರೈಲ್ವೆ ಗೇಟ್ ಇರುವ ಜಾಗವೇ ಹಿಂದಿನ ‘ದಾರಂದ ಕೆರೆ’ಯಾಗಿದ್ದು ರೈಲ್ವೆ ಕಾಮಗಾರಿಯ ಸಮಯದಲ್ಲಿ ಕೆರೆಯು ಸಂಪೂರ್ಣ ನಷ್ಟವಾಗಿದೆ.
ಪುರಾತನ ಕಾಲದಲ್ಲಿ ದೇವಸ್ಥಾನದ ಹಿಂಭಾಗದಲ್ಲಿರುವ ಗುಡ್ಡೆಯಲ್ಲಿದ್ದ ಲಿಂಗವೊಂದನ್ನು ಗ್ರಾಮಸ್ಥರು ಪೂಜಿಸುತ್ತಿದ್ದು , ಆ ಲಿಂಗಕ್ಕೆ ಪ್ರತಿ ದಿನ ಪೂಜೆ ಪುರಸ್ಕಾರಗಳು ನಡೆಯುತ್ತಿದ್ದು, ಪೂಜೆಗಾಗಿ ಅರ್ಚಕರು ಗುಡ್ಡೆಗೆ ಹೋಗುವ ಸಮಯದಲ್ಲಿ ಅರ್ಚಕರ ಮಡದಿಯು ಅರ್ಚಕರ ಜೊತೆಗೆ ಕೈಜೋಡಿಸಿ ಪೂಜಾ ಸಾಹಿತ್ಯಗಳನ್ನು ಗುಡ್ಡಕ್ಕೆ ತರುವ ಸೇವಾ ಕೈoಕರ್ಯ ಮಾಡುತ್ತಿದ್ದರು. ಬಲು ದೈವಭಕ್ತೆಯಾಗಿದ್ದ ಆ ಮಹಿಳೆಯು ಒಮ್ಮೆ ತುಂಬು ಗರ್ಭಿಣಿಯಾಗಿರಲು, ದೇವರ ಪೂಜಾ ಸಾಹಿತ್ಯವನ್ನು ಗುಡ್ಡೆಗೆ ತರಲು ತನಗೆ ಅಸಾಧ್ಯವಾಗಿದೆ, ದೇವರು ಗುಡ್ಡೆಯಿಂದ ಇಳಿದು ಕೆಳಭಾಗಕ್ಕೆ ಬಂದಲ್ಲಿ ತಾನು ದೇವರ ಸೇವೆ ಮಾಡಬಹುದಿತ್ತು ಎಂದು ಬಯಕೆ ಪಟ್ಟ ಹಿನ್ನೆಲೆಯಲ್ಲಿ, ಮರುದಿನ ಗುಡ್ಡದ ಮೇಲಿದ್ದ ಲಿಂಗವು ಆಶ್ಚರ್ಯಕರ ರೀತಿಯಲ್ಲಿ ಗುಡ್ಡದ ಕೆಳಭಾಗದಲ್ಲಿ ಇರುವ ಒಂದು ಕೇಪುಳು ಹೂವಿನ ಗಿಡದ ಕೆಳಭಾಗದಲ್ಲಿ ಉದ್ಭವವಾಗಿತ್ತು, ಹೀಗೆ ಕೇಪುಳು ಗಿಡದ ಕೆಳಗೆ ಪ್ರತ್ಯಕ್ಷವಾದ ಈ ಲಿಂಗವನ್ನು ‘ಕೇಪುಳೇಶ್ವರ’ ಎಂದು ಗ್ರಾಮಸ್ಥರು ಪೂಜಿಸ ತೊಡಗಿದರು.
ಈ ಪಂಚಲಿಂಗೇಶ್ವರ ದೇವಸ್ಥಾನವು ಗ್ರಾಮ ದೇವಸ್ಥಾನವಾಗಿದ್ದು, ಪ್ರಸ್ತುತ ಈ ದೇವಸ್ಥಾನವು ಕುದ್ಮಾರು, ಬೆಳಂದೂರು,ಕಾಣಿಯೂರು, ಚರ್ವಾಕ, ದೋಳ್ಪಾಡಿ, ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ, ಕಾಯ್ಮಣ ಹೀಗೆ 9 ಗ್ರಾಮ ವ್ಯಾಪ್ತಿಗೆ ಒಳಪಟ್ಟ ಮಾಗಣೆ ದೇವಸ್ಥಾನವಾಗಿದೆ.
ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾ, ಒಂದು ಕಾಲದಲ್ಲಿ ಬಹಳ ವೈಭವ ಹಾಗೂ ವಿಜೃಂಭಣೆಯಲ್ಲಿ ಪೂಜೆ- ಪುರಸ್ಕಾರ- ಉತ್ಸವವಾದಿಗಳು ನಡೆದು ಬರುತ್ತಿದ್ದ ಈ ಕ್ಷೇತ್ರವು ಕಾಲದ ಸುಳಿಗೆ ಸಿಲುಕಿ ಶಿಥಿಲಾವಸ್ಥೆಗೆ ಬಂದಿದ್ದು, ಪ್ರಸ್ತುತ ಜೀರ್ಣೋದ್ಧಾರದ ಕೆಲಸ ಸಾಗುತ್ತಿದ್ದು, ಮತ್ತೆ ಹಳೆಯ ವಿಜೃಂಭಣೆಯನ್ನು ಕಾಣುವ ಹಾಗೂ ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ಕಾಲಕೂಡಿ ಬಂದಂತೆ ತೋರುತ್ತಿದೆ.