ಡಾ. ತಾಳ್ತಜೆ ವಸಂತಕುಮಾರ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಎರಡನೇ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯವರು. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ನಿವೃತ್ತರಾಗಿದ್ದಾರೆ. ಮುಂಬಯಿಯ ಕನ್ನಡ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ತಾಳ್ತಜೆಯವರು ಸೃಜನಾತ್ಮಕ ಸಾಹಿತಿಗಳು, ವಿಮರ್ಶಕರು ಹಾಗು ಸಂಶೋಧಕರೂ ಸಹ ಆಗಿರುತ್ತಾರೆ.
ನಿವೃತ್ತ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ತಾಳ್ತಜೆ ವಸಂತಕುಮಾರ ವಿಮರ್ಶೆ ಹಾಗೂ ಸಾಂಸ್ಕೃತಿಕ ಸಂಶೋಧನೆಯಲ್ಲಿ ಗಣನೀಯ ಕೆಲಸ ಮಾಡಿದ್ದಾರೆ. ಈಗಿನ ಕೇರಳದ ಕಾಸರಗೋಡಿನ ತಾಳ್ತಜೆಯವರಾದ ವಸಂತಕುಮಾರ ಜನಿಸಿದ್ದು 1948 ಡಿಸೆಂಬರ 27ರಂದು. ಸ್ನಾತಕೋತ್ತರ ಪದವಿ (ಎಂಎ ಕನ್ನಡ) ಪಡೆದಿರುವ ಅವರು ಸಿದ್ಧಪಡಿಸಿದ ’ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ’ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ದೊರೆತಿದೆ. ಸದ್ಯ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ವಾಸಿಸುತ್ತಿದ್ದಾರೆ.
ಡಾ. ತಾಳ್ತಜೆ ವಸಂತಕುಮಾರ ಅವರು ಒಬ್ಬ ಅತ್ಯುತ್ತಮ ವಿಮರ್ಶಕ, ಹಾಗೂ ಮಾತುಗಾರರು
ಡಾ. ವಸಂತಕುಮಾರರು, ರಾಷ್ಟ್ರಮಟ್ಟದ, ಮತ್ತು ಪ್ರಾದೇಶಿಕ ವಿಚಾರ ಸಂಕಿರಣಗಳು, ಹಾಗೂ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ.ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಆಶ್ರಯದಲ್ಲಿ, ಅನೇಕ ರಾಷ್ಟ್ರ ಮಟ್ಟದ ಮತ್ತು ಪ್ರಾದೇಶಿಕ ವಿಚಾರ ಸಂಕಿರಣಗಳನ್ನು ವ್ಯವಸ್ಥೆಗೊಳಿಸಿ, ನಿರ್ದೇಶಿಸಿದ್ದಾರೆ. ಒಳ್ಳೆಯ ಮಾತುಗಾರರು, ಹಾಗೂ ಅತ್ಯುನ್ನತ ವಿಮರ್ಶಕರಲ್ಲೊಬ್ಬರು.
ಕವಿ ಅರವಿಂದ ನಾಡಕರ್ಣಿ ಅವರ ಸಾಹಿತ್ಯ ಕುರಿತ ’ಬೇರು-ಬಿಳಲು’ ಹಾಗೂ ಜನಪರ ನಿಲುವು, ಸೋಪಾನ ಎಂಬ ಕೃತಿಗಳನ್ನು ಸಂಪಾದಿಸಿದ್ದಾರೆ. ಸಂಶೋಧನ ರಂಗ, ಸಾರಸ, ಸಾಂಸ್ಕೃತಿಕ ಸಂಶೋಧನೆ, ಮುತ್ತಿನ ಸತ್ತಿಗೆ ಅವರ ಸಂಶೋಧನಾತ್ಮಕ ಕೃತಿಗಳು. ಅವರ ’ಬೌದ್ದಾಯನ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಗೊರೂರು ಸಾಹಿತ್ಯ ಪ್ರಶಸ್ತಿ ಸಂದಿವೆ.